ಕಲಬುರಗಿ: ವಕ್ಪ್ ತೆಗಿಯಬೇಕೆಂದು ಬಿಜೆಪಿಯವರು ಹೇಳ್ತಾರಲ್ಲ, ಒಂದೂವರೆ ವರ್ಷದ ಹಿಂದೆ ಬಿಜೆಪಿ ಸರ್ಕಾರವೇ ಇತ್ತು. ಆಗ ಇವರು ಕತ್ತೆ ಕಾಯುತ್ತಿದ್ದರಾ? ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೇ ಇದೆಲ್ಲಾ ನೆನಪಾಗುತ್ತಾ ಎಂದು ಸಚಿವ ಪ್ರಿಯಾಂಕ್ ಖರ್ಗೆ ಗುಡುಗಿದರು.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಚೆಯಿಂದಲೂ ರೈತರಿಗೆ ನೋಟಿಸ್ ಬಂದಿವೆ. ಎಲೆಕ್ಷನ್ ಬಂದಾಗ ಇದನ್ನ ದೊಡ್ಡ ಇಶ್ಯು ಮಾಡಿದ್ದಾರೆ. ನಾಚಿಕೆಯಾಗಲ್ವಾ ನಿಮಗೆ? ವಕ್ಪ್ ಆಸ್ತಿಯನ್ನು ಜಿಐಎಸ್ ಮ್ಯಾಪ್ ಮಾಡಿಸುತ್ತಿರುವುದು ಯಾರು? ಬಿಜೆಪಿಯವರೇ ಮಾಡುತ್ತಿರುವುದು. ಇದಕ್ಕೆ ಶೋಭಾ ಕರಂದ್ಲಾಜೆ ಎನು ಹೇಳುತ್ತಾರೆ. ಅವಾಗ ಯಾಕೆ ಶೋಭಾ ಅವರು ಪ್ರತಿಭಟನೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ಜಿಐಎಸ್ ಮ್ಯಾಪಿಂಗ್ ಗೆ 330 ಕೋಟಿ ಖರ್ಚು ಮಾಡಿದ್ದು ಬಿಜೆಪಿಯ ಕೇಂದ್ರ ಸರ್ಕಾರ. ಆವಾಗ ಇವರಿಗೆ ಇದರ ಅರಿವಿತ್ತಲ್ಲ. ಈಗ್ಯಾಕೆ ಇಂತಹ ಡ್ರಾಮಾಗಳನ್ನು ಮಾಡಿ ರೈತರನ್ನು, ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.
ವಕ್ಪ್ ಆಸ್ತಿ ಸಂರಕ್ಷಣೆಗೆ ಹಣ ಖರ್ಚು ಮಾಡಿದ್ದು ಬಿಜೆಪಿಯವರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರಕ್ಕೆ 11 ವರ್ಷವಾಯಿತು, ಇನ್ನೂ ಯಾಕ್ ಬ್ಯಾನ್ ಮಾಡಿಲ್ಲ? ಕಾಂಗ್ರೆಸ್ ಆಧಿಕಾರದಲ್ಲಿದ್ದ ರಾಜ್ಯಗಳಲ್ಲಿ ಮಾತ್ರವೇ ನಿಮಗೆ ವಕ್ಫ್ ರದ್ದು ವಿಚಾರ ಹೊಳೆಯುತ್ತದೇನು ಎಂದರು.
ವಕ್ಪ್ ವಿಚಾರವಾಗಿ ರಾಜ್ಯ ಜೆಪಿಸಿ ಸಮಿತಿ ಭೇಟಿಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ಜಂಟಿ ಪಾರ್ಲಿಮೆಂಟ್ ಸಮಿತಿ ಎಂದರೇನು? ಕಮಿಟಿಯ ಎಲ್ಲಾ ಸದಸ್ಯರು ಬರಬೇಕಲ್ವಾ? ಬರೀ ಅಧ್ಯಕ್ಷರು ಮಾತ್ರ ಬಂದಿದ್ದಾರೆ. ಅವರ ಜೊತೆ ಯಾರಿದ್ದಾರೆ ಬಿಜೆಪಿಯ ಮಾಜಿ ಎಂಪಿ ಇದ್ದಾರೆ. ಅವರಿಗೂ ಸಮಿತಿಗೂ ಏನು ಸಂಬಂಧ? ನಿಮ್ಮ ನಾಟಕ ಅರ್ಥವಾಗುವುದಿಲ್ಲವೆ? ಉಪ ಚುನಾವಣೆಗಳಲ್ಲಿ ನೀವು ಹೀಗೆ ಅರ್ಥಹೀನವಾಗಿ ನಡೆದುಕೊಂಡರೆ ನಿಮ್ಮ ಸಿದ್ಧಾಂತಕ್ಕೇನು ಅರ್ಥ ಎಂದು ವಾಗ್ದಾಳಿ ನಡೆಸಿದರು.