ಮುಂಬಯಿ: ರೈಲು ಹತ್ತುವ ವೇಳೆ ರೈಲಿನಿಂದ ಕೆಳಗೆ ಬಿದ್ದ ಮಹಿಳೆಯ ಕಾಲಿನ ಮೇಲೆ ರೈಲು ಹರಿದ ಪರಿಣಾಮ ಎರಡೂ ಕಾಲುಗಳನ್ನು ಕಳೆದುಕೊಂಡಿರುವ ಘಟನೆ ಮುಂಬೈನ ಬೇಲಾಪುರ ನಿಲ್ದಾಣದಲ್ಲಿ ಸೋಮವಾರ ಸಂಭವಿಸಿದೆ.
ಕಳೆದ ಕೆಲ ದಿನಗಳಿಂದ ಮುಂಬಯಿ ಸುತ್ತ ಧಾರಾಕಾರ ಮಳೆಯಾಗುತ್ತಿದ್ದು ಪರಿಣಾಮ ಕೆಲವೊಂದು ಕಡೆಗಳಲ್ಲಿ ರೈಲು ಹಳಿಗಳು ಜಲಾವೃತಗೊಂಡಿದೆ ಇದರಿಂದಾಗಿ ಕೆಲವೊಂದು ರೈಲುಗಳ ಸಂಚಾರ ಸ್ಥಗಿತಗೊಂಡಿದೆ, ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಇಲ್ಲಿನ ಜನ ರೈಲನ್ನೇ ನಂಬಿಕೊಂಡಿದ್ದಾರೆ.
ಅದರಂತೆ ಇಲ್ಲೊಬ್ಬರು ಮಹಿಳೆ ಮುಂಬೈನ ಬೇಲಾಪುರ ನಿಲ್ದಾಣದಿಂದ ಥಾಣೆಗೆ ಹೋಗಲು ಬೆಳಿಗ್ಗೆ ರೈಲ್ವೆ ಪ್ಲಾಟ್ ಫಾರ್ಮ್ ಗೆ ಬಂದಿದ್ದಾರೆ ಈ ವೇಳೆ ಹೆಚ್ಚಿನ ಜನಸಂದಣಿ ಇದ್ದ ಪರಿಣಾಮ ಮಹಿಳೆ ರೈಲು ಹತ್ತುವ ವೇಳೆ ಆಕಸ್ಮಿಕವಾಗಿ ರೈಲಿನಿಂದ ಕೆಳಗೆ ಬಿದ್ದಿದ್ದಾರೆ.
ಅಷ್ಟೋತ್ತಿಗಾಗಲೇ ರೈಲು ಹೊರಟಿದೆ ಇದನ್ನು ಗಮನಿಸಿದ ಅಲ್ಲಿದ್ದ ಭದ್ರತಾ ಸಿಬಂದಿ ಕೂಡಲೇ ಸೂಚನೆ ನೀಡಿ ರೈಲನ್ನು ನಿಲ್ಲಿಸಿದ್ದಾರೆ. ರೈಲಿನ ಕೆಳಗೆ ಹೋಗಿ ಮಹಿಳೆಯನ್ನು ಹೊರಗೆಳೆದಿದ್ದಾರೆ ಆದರೆ ಅಷ್ಟೋತ್ತಿಗಾಗಲೇ ರೈಲಿನ ಬೋಗಿ ಆಕೆಯ ಕಾಲಿನ ಮೇಲೆ ಹರಿದ ಪರಿಣಾಮ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾರೆ.
ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ಮಹಿಳೆಯ ಅರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.