ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೊಳ ಗಾಗಿರುವ ಶಾಸಕ ಮುನಿರತ್ನ ಮನೆಯಲ್ಲಿ ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವ ಲ್ಯಾಪ್ ಟಾಪ್, ಪೆನ್‌ಡ್ರೈವ್‌ಗಳಲ್ಲಿ ಕೆಲ ರಾಜಕೀಯ ನಾಯಕರ ಖಾಸಗಿ ಕ್ಷಣಗಳ ವಿಡಿಯೋಗಳ ಪತ್ತೆಯಾಗಿವೆ ಎಂದು ಹೇಳಲಾಗಿದೆ.
ಅತ್ಯಾಚಾರ, ಸುಲಿಗೆ, ಜೀವ ಬೆದರಿಕೆ ಹಾಗೂ ಜಾತಿನಿಂದನೆ ಪ್ರಕರಣಗಳ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಇತ್ತೀಚೆಗಷ್ಟೇ ಮುನಿರತ್ನ ಮನೆ ಸೇರಿ 12ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಈ ವೇಳೆ ವೈಯಾಲಿಕಾವಲ್‌ನಲ್ಲಿರುವ ಮುನಿರತ್ನ ಮನೆಯಲ್ಲಿ ಪತ್ತೆಯಾದ ಲ್ಯಾಪ್‌ಟಾಪ್, ಹಾರ್ಡ್ ಡಿಸ್ಕ್, ಪೆನ್‌ಡ್ರೈವ್‌ಗಳು ಸೇರಿ ಕೆಲ ದಾಖಲೆಗಳನ್ನು ವಶಕ್ಕೆ ಪಡೆಯಲಾಯಿತು.
ಇದೀಗ ಪೆನ್‌ಡ್ರೈವ್ ಹಾಗೂ ಲ್ಯಾಪ್‌ಟಾಪ್‌ಗಳಲ್ಲಿ ರಾಜಕೀಯ ನಾಯಕರು ಹಾಗೂ ಸರ್ಕಾರಿ ಅಧಿಕಾರಿಗಳ ಖಾಸಗಿ ವಿಡಿಯೋಗಳು ಪತ್ತೆಯಾಗಿವೆ. ಅಲ್ಲದೆ, ಮಹಿಳೆಯರ ಅಶ್ಲೀಲ ವಿಡಿಯೋಗಳು ಇವೆ. ದುರುದ್ದೇಶಪೂರ್ವಕವಾಗಿಯೇ ಈ ವಿಡಿಯೋಗಳನ್ನು ಇರಿಸಿಕೊಳ್ಳಲಾಗಿದೆ. ಹೀಗಾಗಿ ಈ ವಿಡಿಯೋಗಳ ಅಸಲಿಯತ್ತು ಪರೀಕ್ಷೆಗಾಗಿ ಪೆನ್‌ಡ್ರೈವ್ ಹಾಗೂ ಲ್ಯಾಪ್‌ಟಾಪ್ ಗಳನ್ನು ಎಫ್ಎಸ್‌ಎಲ್‌ಗೆ ಕಳುಹಿಸಲಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.