ಬೆಂಗಳೂರು: ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಇಂದು ಡಿಸ್ಚಾರ್ಜ್ ಆಗಿ ಮನೆಗೆ ಮರಳಿದರು.
ಪಾರ್ಶ್ವವಾಯುಗೆ ತುತ್ತಾಗಿದ್ದ ಕುಮಾರಸ್ವಾಮಿ ಅವರು ಚೇತರಿಕೆ ಕಂಡಿದ್ದು, ಜಯನಗರದ ಆಪೊಲೊ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಪುನರ್ಜನ್ಮ ಸಿಕ್ಕಿದೆ. ದೇವರು, ವೈದ್ಯರು, ತಂದೆ ತಾಯಿಗಳ ಆಶೀರ್ವಾದವೇ ಇದಕ್ಕೆ ಕಾರಣ. ಗೋಲ್ಡನ್ ಅವರ್ ನಲ್ಲಿ ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ನನಗೆ ಪುನರ್ಜನ್ಮ ಸಿಕ್ಕಿದೆ ಎಂದರು.
ನನ್ನ ಆರೋಗ್ಯದ ಬಗ್ಗೆ ಕಾಳಜಿ ತೋರಿದ ನಾಡಿನ ಜನತೆ, ಮುಖಂಡರುಗಳಿಗೆ ಧನ್ಯವಾದ ಎಂದ ಅವರು, ಸ್ಟ್ರೋಕ್ ಬಗ್ಗೆ ಯಾರು ನಿರ್ಲಕ್ಷ್ಯ ತೋರಬೇಡಿ ಎಂದು ಮನವಿ ಮಾಡಿದರು.
ಆಸ್ಪತ್ರೆಯಿಂದ ಮನೆಯತ್ತ ಪ್ರಯಾಣ ಬೆಳೆಸಿದ ಕುಮಾರಸ್ವಾಮಿ ಅವರಿಗೆ ಪುತ್ರ ನಿಖಿಲ್ ಸಾಥ್ ನೀಡಿದರು.