ದಾವಣಗೆರೆ : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲೇಬೇಕು ಎಂದು ವಿಪಕ್ಷಗಳು ಅಗ್ರಹಿಸುತ್ತಿವೆ. ಇದರ ಬೆನ್ನಲ್ಲೇ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ ಹೊಸ ಬಾಂಬ್ ಒಂದನ್ನು ಸಿಡಿಸಿದ್ದು, ಕೆಲವರು ಸಿಎಂ ಸ್ಥಾನಕ್ಕಾಗಿ ಸಾವಿರಾರು ಕೋಟಿ ಹಣ ಇಟ್ಟುಕೊಂಡು ಕಾಯುತ್ತಿದ್ದಾರೆ ಎಂದು ಸ್ಪೋಟಕವಾದ ಹೇಳಿಕೆ ನೀಡಿದ್ದಾರೆ.
ಇಂದು ದಾವಣಗೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಲವರು ಸಿಎಂ ಆಗಲು ಸಾವಿರ ಕೋಟಿ ಹಣ ಇಟ್ಟುಕೊಂಡು ಕಾಯುತ್ತಿದ್ದಾರೆ.ಇದರಲ್ಲಿ ಕಾಂಗ್ರೆಸ್ನವರೂ ಇದ್ದಾರೆ, ಬೇರೆ ಪಕ್ಷದವರೂ ಇದ್ದಾರೆ. ಸಾವಿರ ಕೋಟಿ ಹಣ ಇಟ್ಟುಕೊಂಡು ಸಿಎಂ ಆಗಲು ಸಿದ್ಧರಿದ್ದಾರೆ ಎಂದು ಸ್ಪೋಟಕ ವಾದಂತಹ ಹೇಳಿಕೆಯನ್ನು ನೀಡಿದ್ದಾರೆ.
ಬಿಜೆಪಿಯಲ್ಲಿ ಭಿನ್ನಮತ ಇದೆ. ಪಕ್ಷದ ಗೊಂದಲಗಳ ಬಗ್ಗೆ ಹೈಕಮಾಂಡ್ಗೆ ಮಾಹಿತಿ ರವಾನೆ ಮಾಡಲಾಗಿದೆ. ಬಹಿರಂಗ ಹೇಳಿಕೆ ನೀಡದಂತೆ ಹೈಕಮಾಂಡ್ ಸೂಚಿಸಿದೆ. ಹೀಗಾಗಿ ನಾವು ಹೆಚ್ಚು ಮಾತಾಡಲ್ಲ. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾಯಿಸುವ ಅಧಿಕಾರ ನಮಗಿಲ್ಲ. ಹೈಕಮಾಂಡ್ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತೆ. ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತೋ ಕಾದು ನೋಡುತ್ತೇವೆ ಎಂದು ಹೇಳಿದ್ದಾರೆ.