ಬೆಂಗಳೂರು: ನಟ, ನಿರ್ದೇಶಕ ಗುರುಪ್ರಸಾದ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಮಾದನಾಯಕನಹಳ್ಳಿ ಠಾಣೆ ಪೊಲೀಸರು, ಜಪ್ತಿ ಮಾಡಿದ ಮೊಬೈಲ್‌ಗಳನ್ನು ರಿಟ್ರೈವ್‌ಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಮತ್ತೂಂದೆಡೆ ಸಾಲಗಾರರ ಪಟ್ಟಿ ತಯಾರಿಸಿ ನೋಟಿಸ್ ಕೊಡಲು ಸಿದ್ಧತೆ ನಡೆಸಿದ್ದಾರೆ.
ನಿರ್ದೇಶಕ ಗುರು ಪ್ರಸಾದ್ ಸಿನಿಮಾಗಾಗಿ ಕೋಟ್ಯಂತರ ರೂ. ಸಾಲ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ. ಅಲ್ಲದೆ, ಅವರ 2ನೇ ಪತ್ನಿ ಸಮಿತ್ರಾ ಕೂಡ ದೂರಿನಲ್ಲಿ ಸಾಲ ಮಾಡಿಕೊಂಡಿದ್ದರು ಎಂದು ಉಲ್ಲೇಖೀಸಿದ್ದಾರೆ. ಹೀಗಾಗಿ ಗುರುಪ್ರಸಾದ್ ಎಷ್ಟು ಸಾಲ ಮಾಡಿ ಕೊಂಡಿದ್ದರು. ಸಾಲ ಪಾವತಿಯೇ ಮಾಡಿಲ್ಲವೇ? ಅವರಿಂದ ಕಿರುಕುಳ ಇತ್ತೆ? ಎಂಬ ಬಗ್ಗೆ ಮಾಹಿತಿ ಪಡೆಯಲು ಯಾರೆಲ್ಲ ಸಾಲ ಕೊಟ್ಟಿದ್ದಾರೆ ಎಂಬ ಮಾಹಿತಿ ಪಡೆಯಲಾಗುತ್ತಿದೆ.
ಜತೆಗೆ ಅವರ ಮೊಬೈಲ್ ರಿಟ್ರೈವ್ ಬಳಿಕ ಒಂದಷ್ಟು ಮಾಹಿತಿ ದೊರೆಯಲಿದೆ. ಅಲ್ಲದೆ, ಬ್ಯಾಂಕ್‌ನಿಂದ ಹಣಕಾಸಿನ ವಹಿವಾಟಿನ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತದೆ. ಇನ್ನು ಫ್ಲ್ಯಾಟ್‌ನಲ್ಲಿ ಮೂರು ಮೊಬೈಲ್‌ಗಳು, ಎರಡು ಟ್ಯಾಬ್‌ಗಳು ಹಾಗೂ 1 ಲ್ಯಾಪ್‌ಟಾಪ್ ಪತ್ತೆಯಾಗಿದ್ದು, ಎಲ್ಲವನ್ನು ಎಫ್ಎಸ್‌ಎಲ್‌ಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಂಬಂಧಿಕರ ಹೇಳಿಕೆ ದಾಖಲು: ಸಾಲಗಾರರ ಪಟ್ಟಿ ತಯಾರಿ ನಡುವೆ, ಗುರುಪ್ರಸಾದ್ ಸಂಬಂಧಿಕರ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತದೆ. ಮೊದಲಿಗೆ 2ನೇ ಪತ್ನಿ, ಬಳಿಕ ಮೊದಲ ಪತ್ನಿ ಹಾಗೂ ಇತರೆ ಸಂಬಂಧಿಕರ ಹೇಳಿಕೆ ಪಡೆಯುತ್ತೇವೆ. ಆ ನಂತರ ಗುರುಪ್ರಸಾದ್ ಜತೆ ಕೆಲಸ ಮಾಡುತ್ತಿದ್ದ ಸಹ ನಿರ್ದೇಶಕರು ಹಾಗೂ ಇತರರ ಹೇಳಿಕೆ ಪಡೆಯಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.