ಬೆಂಗಳೂರು: ಗುತ್ತಿಗೆದಾರ ಚಲುವರಾಜು ಅವರಿಗೆ ಜೀವ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ ಆರೋಪದಲ್ಲಿ ತಲೆಮರೆಸಿಕೊಂಡಿದ್ದ ಬೆಂಗಳೂರಿನ ಆರ್‌ಆರ್ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರನ್ನು ಕೊನೆಗೂ ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮದಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ.
ಕೋಲಾರದಿಂದ ಆಂಧ್ರದ ಚಿತ್ತೂರಿಗೆ ತೆರಳುತ್ತಿದ್ದ ಮುನಿರತ್ನ ಅವರನ್ನು ಮೊಬೈಲ್ ಫೋನ್ ಲೊಕೇಷನ್ ಆಧರಿಸಿ ಪತ್ತೆ ಮಾಡಲಾಗಿದೆ. ನಂತರ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಕೇಸ್ ದಾಖಲಾದಾಗಿನಿಂದ ಮುನಿರತ್ನ ಮೇಲೆ ಪೊಲೀಸರು ನಿಗಾ ವಹಿಸಿದ್ದರು.
ಸದ್ಯ ಮುನಿರತ್ನರನ್ನು ವಶಕ್ಕೆ ಪಡೆದಿರುವ ಕೋಲಾರ ಪೊಲೀಸರು ಬೆಂಗಳೂರಿಗೆ ಕರೆತರುತ್ತಿದ್ದಾರೆ. ಬೆಂಗಳೂರಿಗೆ ಕರೆತಂದ ಬಳಿಕ ಅವರನ್ನು ಬೆಂಗಳೂರು ಪೊಲೀಸರಿಗೆ ಹಸ್ತಾಂತರ ಮಾಡಲಿದ್ದಾರೆ.
ಮುನಿರತ್ನ ವಿರುದ್ಧದ ಪ್ರಕರಣ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಮುನಿರತ್ನ ಪ್ರಕರಣ ಮುಂದಿಟ್ಟುಕೊಂಡು ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ದಲಿತ ವಿರೋಧಿ ಎಂದು ಕಾಂಗ್ರೆಸ್ ಟೀಕಿಸಿದೆ.