ಚಿಕ್ಕಬಳ್ಳಾಪುರ: ತಮ್ಮ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರಿಂದ ಮನನೊಂದ ಯುವ ಪ್ರೇಮಿಗಳು ಶಿಡ್ಲಘಟ್ಟ ತಾಲೂಕಿನ ಭೀರಪ್ಪನಹಳ್ಳಿ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ನೇಣಿಗೆ ಶರಣಾದ ಪ್ರೇಮಿಗಳನ್ನು ಚಿಂತಾಮಣಿ ತಾಲೂಕಿನ ಸೀತಾರಾಮಪುರ ಗ್ರಾಮದ 22 ವರ್ಷದ ನವೀನ್ ಮತ್ತು 15 ವರ್ಷದ ಅಪ್ರಾಪ್ತೆ ಎಂದು ತಿಳಿದುಬಂದಿದೆ. ಇಬ್ಬರು ಒಂದೇ ಸಮುದಾಯದವರಾಗಿದ್ದು ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದರು. ಅಲ್ಲದೆ ಯುವಕನ ವಿರುದ್ಧ ಕಳೆದ ಮಾರ್ಚ್ 30ರಂದು ಶಿಡ್ಲಘಟ್ಟ ತಾಲೂಕಿನ ಬಟ್ಲಹಳ್ಳಿ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿದ್ದರು.
ಈ ವೇಳೆ ತಲೆಮರೆಸಿಕೊಂಡಿದ್ದ ನವೀನ್ ನನ್ನು ಬಟ್ಲಹಳ್ಳಿ ಪೊಲೀಸರು ಗೌನಿಪಲ್ಲಿ ಗ್ರಾಮದಲ್ಲಿ ಬಂಧಿಸಿದ್ದರು. ಜೈಲಿನಿಂದ ಹೊರಬಂದಿದ್ದ ನವೀನ್ ಅಪ್ರಾಪ್ತೆಯನ್ನು ಭೇಟಿ ಮಾಡಿದ್ದನು. ಅಲ್ಲದೆ ಸೆಪ್ಟೆಂಬರ್ 13ರ ಸಂಜೆ ಭೀರಪ್ಪನಹಳ್ಳಿ ಅರಣ್ಯ ಪ್ರದೇಶಕ್ಕೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.