ಉಡುಪಿ: ‘ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಬೇಸೂರಿನಲ್ಲಿ ಅಣು ಸ್ಥಾವರ ಘಟಕ ನಿರ್ಮಾಣಕ್ಕೆ ಸಂಬಂಧಿಸಿ ಇಲ್ಲಿಯವರೆಗೆ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಬಂದಿಲ್ಲ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ಕಾರ್ಕಳದಲ್ಲಿ ಸೋಮವಾರ ವಲಯ ಅರಣ್ಯಾಧಿಕಾರಿಗಳ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ನೂತನ ಕಟ್ಟಡ ಉದ್ಘಾಟಿಸಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಈಗಾಗಲೇ ಪಶ್ಚಿಮ ಘಟ್ಟದ ಸಂರಕ್ಷಣೆಗೆ ಎಲ್ಲಾ ರೀತಿಯ ಕ್ರಮವನ್ನು ಸರ್ಕಾರ ಕೈಗೊಂಡಿದೆ’ ಎಂದರು.
‘ಅಣು ಸ್ಥಾವರಕ್ಕೆ ಸಂಬಂಧಿಸಿ ಸಮೀಕ್ಷೆ ನಡೆಯುತ್ತಿರುವ ವಿಚಾರವು ನಮ್ಮ ಗಮನಕ್ಕೆ ಬಂದಿಲ್ಲ. ಪ್ರಸ್ತಾವನೆ ಬಂದಾಗ ಪ್ರತಿಕ್ರಿಯೆ ನೀಡುತ್ತೇವೆ’ ಎಂದು ಹೇಳಿದರು.
‘ಕಸ್ತೂರಿ ರಂಗನ್ ವರದಿಯಿಂದ ಜನರಿಗೆ ಸಮಸ್ಯೆಯಾಗಬಾರದು ಎಂದು ಆ ವರದಿಯನ್ನು ನಾವು ಒಪ್ಪಲಿಲ್ಲ. ತಿರಸ್ಕಾರ ಮಾಡಬೇಕೆಂದು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ನಮ್ಮಲ್ಲಿ ಶೇ 83 ರಷ್ಟು ಪಶ್ಚಿಮಘಟ್ಟ ಸುರಕ್ಷಿತವಾಗಿದೆ’ ಎಂದು ತಿಳಿಸಿದರು.
