ಭದ್ರಾವತಿ : ಶಿಕ್ಷಕರ ದಿನಾಚರಣೆ ಯಾದ ಇಂದು ಇಲ್ಲಿನ ದೈವಜ್ಞ ಕಲ್ಯಾಣ ಮಂಟಪದಲ್ಲಿ ತಮಗೆ ಆಗಿರುವ ಅನ್ಯಾಯದ ವಿರುದ್ಧ ಪಿಎಸ್‌ಟಿ ಶಿಕ್ಷಕರು ಮೌನ ಪ್ರತಿಭಟನೆಯನ್ನು ನಡೆಸುವುದರ ಮೂಲಕ ರಾಜ್ಯ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
2017 ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅನ್ಯಾಯಕ್ಕೆ ಒಳಗಾಗಿರುವ ಒಂದರಿಂದ ಐದನೇ ತರಗತಿ ಗೆ ಹಿಂಬಡ್ತಿ ಹೊಂದಿರುವ ನೊಂದ ಶಿಕ್ಷಕರು ತಮಗೆ ಆಗಿರುವ ಅನ್ಯಾಯದ ವಿರುದ್ಧ ಧ್ವನಿಯೆತ್ತಿದ್ದಾರೆ. ಈ ಹಿಂದೆ ನೇಮಕಾತಿ ಸಂದರ್ಭದಲ್ಲಿ ಒಂದರಿಂದ ಏಳನೇ ತರಗತಿಗೆ ಎಂದು ನೇಮಕಾತಿ ಮಾಡಿಕೊಳ್ಳಲಾಗಿದ್ದು,ಈಗ ಇದ್ದಕ್ಕಿದ್ದ ಹಾಗೆ ಹಿಂಬಡ್ತಿ ನೀಡಿರುವುದು ಸರಿಯಲ್ಲ ಎಂದು ಪ್ರತಿಭಟನಾ ಶಿಕ್ಷಕರು ತಿಳಿಸಿದ್ದಾರೆ.
ಈ ಹಿಂಬಡ್ತಿಯಿದಾಗಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಶಿಕ್ಷಕರು ಅನ್ಯಾಯಕ್ಕೊಳಗಾಗುತ್ತಿದ್ದು, ಸರ್ಕಾರ ಈ ಕೂಡಲೇ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಶಿಕ್ಷಕರುಗಳಾದ ಮಹದೇವಪ್ಪ, ವಸಂತ್ ರಾವ್ ದಾಳೆ ಸೇರಿದಂತೆ ಇನ್ನೂ ಹಲವಾರು ಶಿಕ್ಷಕರು ಉಪಸ್ಥಿತರಿದ್ದರು.