ಚೆನ್ನೈ: ತಾನು ಸತ್ತರೆ ಮಗನ ಕಾಲೇಜು ಶುಲ್ಕವನ್ನು ಸರ್ಕಾರ ಭರಿಸುತ್ತದೆ ಎಂದು ಮಹಿಳೆಯೊಬ್ಬರು ಚಲಿಸುತ್ತಿರುವ ಬಸ್ಸಿನ ಮುಂದೆ ಹಾರಿ ಪ್ರಾಣಬಿಟ್ಟ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಪಾಪತಿ(45) ಮೃತ ಮಹಿಳೆ.
ಕಳೆದ 15 ವರ್ಷದಿಂದ ಗಂಡನಿಂದ ದೂರವಾಗಿ ಕಷ್ಟಪಟ್ಟು ಮಗನನ್ನು ಸಾಕಿ ಬೆಳೆಸಿದ ಪಾಪತಿ ಸೇಲಂನ ಕಲೆಕ್ಟರ್ ಕಛೇರಿಯಲ್ಲಿ ಕಳೆದ ಕೆಲ ಸಮಯದಿಂದ ಸ್ವಚ್ಛತೆಯ ಕೆಲಸವನ್ನು ಮಾಡುತ್ತಿದ್ದರು.
ಮಗನ ಕಾಲೇಜು ಶುಲ್ಕವನ್ನು ಪಾವತಿಸಲು ಸಾಧ್ಯವಾಗದ ಕಾರಣ ಪಾಪತಿ ಖಿನ್ನತೆಗೆ ಒಳಗಾಗಿದ್ದರು. ಈ ವೇಳೆ ಯಾರೋ ಒಬ್ಬರು ಪಾಪತಿಯ ಬಳಿ “ನೀನು ಅಪಘಾತದಲ್ಲಿ ಸತ್ತರೆ ನಿನ್ನ ಮಗನ ಕಾಲೇಜು ಶುಲ್ಕದೊಂದಿಗೆ, ಆತನ ಭವಿಷ್ಯವನ್ನು ಸರ್ಕಾರ ನೋಡಿಕೊಳ್ಳುತ್ತದೆ” ಎಂದಿದ್ದರು. ಮೊದಲೇ ಖಿನ್ನತೆಗೆ ಒಳಗಾಗಿದ್ದ ಪಾಪತಿ ಈ ಮಾತನ್ನು ನಿಜವೆಂದು ನಂಬಿ ಚಲಿಸುತ್ತಿರುವ ಬಸ್ಸಿನ ಮುಂದೆ ಹೋಗಿ ನಿಂತಿದ್ದಾರೆ. ವೇಗವಾಗಿ ಬರುತ್ತಿದ್ದ ಬಸ್ ಪಾಪತಿ ಅವರ ಮೇಲೆ ಹರಿದಿದೆ.
ಜೂ.28 ರಂದು ಘಟನೆ ನಡೆದಿದ್ದು, ಸಾವಿನ ಹಿಂದಿನ ಕಾರಣ ತಡವಾಗಿ ಬೆಳಕಿಗೆ ಬಂದಿದೆ. ಬಸ್ಸಿನ ಮುಂದೆ ಹಾರುವ ಮುನ್ನ ಅದೇ ದಿನ ಪಾಪತಿ ಮತ್ತೊಂದು ಬಸ್ಸಿನ ಮುಂದೆ ಹಾರಲು ಯತ್ನಿಸಿದ್ದರು. ಆದರೆ ಆ ವೇಳೆ ದ್ವಿಚಕ್ರ ವಾಹನ ಅವರಿಗೆ ಢಿಕ್ಕಿ ಹೊಡೆದಿತ್ತು ಎಂದು ವರದಿ ತಿಳಿಸಿದೆ.