ಶಿವಮೊಗ್ಗ: ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ಇಬ್ಬರು ಆರೋಪಿಗಳನ್ನು ಗುರುವಾರ ಶಿವಮೊಗ್ಗ ಜೈಲಿಗೆ ಕರೆತರಲಾಗಿದೆ.
ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ A6 ಜಗದೀಶ್ ಹಾಗೂ A12 ಲಕ್ಷ್ಮಣ್ ಶಿವಮೊಗ್ಗ ಜೈಲಿಗೆ ಸ್ಥಳಾಂತರವಾಗಿದ್ದಾರೆ.
ರಾಜ್ಯದಲ್ಲೇ ಹೈಟೆಕ್ ಕಾರಾಗೃಹ ಎಂಬ ಖ್ಯಾತಿ ಹೊಂದಿರುವ ಶಿವಮೊಗ್ಗ ಜೈಲು ಕೊರಿಯನ್ ಮಾದರಿಯಲ್ಲಿದೆ. 270 ಕೊಠಡಿ ಹೊಂದಿರುವ ಕೇಂದ್ರ ಕಾರಾಗೃಹದಲ್ಲಿ ಪ್ರಸ್ತುತ 773 ಜನ ಖೈದಿಗಳಿದ್ದಾರೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಅವರಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ರಾಜಾತಿಥ್ಯ ನೀಡುತ್ತಿರುವ ಬಗ್ಗೆ ಫೋಟೋ ಮತ್ತು ವಿಡಿಯೋ ವೈರಲ್ ಆಗ ಬೆನ್ನಲ್ಲೇ ಈ ಪ್ರಕರಣದ ಆರೋಪಿಗಳನ್ನು ಬೇರೆ ಬೇರೆ ಕಾರಾಗೃಹಕ್ಕೆ ಸ್ಥಳಾಂತರಿಸಲು ರಾಜ್ಯ ಸರ್ಕಾರ ಸೂಚಿಸಿತ್ತು. ಹೀಗಾಗಿ ಇಬ್ಬರು ಆರೋಪಿಗಳು ಶಿವಮೊಗ್ಗಕ್ಕೆ ಶಿಫ್ಟ್ ಮಾಡಲಾಗಿದೆ.
ಪ್ರಕರಣದ ಎ2 ದರ್ಶನ್ ನನ್ನು ಬಳ್ಳಾರಿ ಕೇಂದ್ರ ಜೈಲಿಗೆ ಸ್ಥಳಾಂತರಿಸಲಾಗಿದೆ. ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳು ಮಾತ್ರ ಇದ್ದಾರೆ.