ಶಿವಮೊಗ್ಗ : ಯಾರು ತಿಪ್ಪರ ಲಾಗ ಹೊಡೆದರೂ ಸಿದ್ದರಾಮಯ್ಯ ರಾಜೀನಾಮೆ ಕೊಡಲ್ಲ ಎಂದು ಬಿಜೆಪಿಗೆ ಖಡಕ್ ಎಚ್ಚರಿಕೆ ನೀಡಿರುವ ಸಚಿವ ಮಧು ಬಂಗಾರಪ್ಪ ಸಿಟಿ ರವಿ, ನಾರಾಯಣಸ್ವಾಮಿ ಎಲ್ಲ ಯಾರು ಎಂದು ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಕಚೇರಿಗಳನ್ನು ಉದ್ಘಾಟನೆ ಮಾಡುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳ ಬಗ್ಗೆ ವಿರೋಧ ಪಕ್ಷದವರು ಹಗುರವಾಗಿ ಮಾತನಾಡುತ್ತಿದ್ದರು. ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಕೊಟ್ಟ ಮಾತನ್ನು ನಡೆಸಿಕೊಂಡು ಹೋಗುತ್ತದೆ. ದೇವರಾಜ್ ಅರಸು ಹಾಗೂ ಸಿದ್ದರಾಮಯ್ಯ ಮುಂದೆಯೂ ಜನರ ಪರವಾಗಿರುತ್ತಾರೆ ಎಂದರು.
ಬಿಜೆಪಿ ನಾಯಕರಿಂದ ಮೂಡಾ ಹಗರಣದಲ್ಲಿ ಸಿಎಂ ರಾಜೀನಾಮೆ ಆಗ್ರಹಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಮಧುಬಂಗಾರಪ್ಪ, ಯಾರು ಸಿಟಿ ರವಿ? ಯಾರು ನಾರಾಯಣಸ್ವಾಮಿ ? ಕಾಂಗ್ರೆಸ್ ಪಕ್ಷದವರಾ? ಸಿಎಂ ರಾಜೀನಾಮೆ ಬಗ್ಗೆ ಕಾಂಗ್ರೆಸ್ ಪಕ್ಷದ ಹೈ ಕಮಾಂಡ್ ತೀರ್ಮಾನ ಮಾಡಬೇಕು.
ಬಿಜೆಪಿಗರಿಗೆ ಹೊಟ್ಟೆಕಿಚ್ಚು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ನಡೆಸುವ ಪ್ರಯತ್ನ ಸಂವಿಧಾನಕ್ಕೆ ವಿರುದ್ಧವಾದದ್ದು, ಹೊಟ್ಟೆ ಕಿಚ್ಚಿಗೆ ಬಿಜೆಪಿಯವರು ಶುರು ಮಾಡಿದ್ದಾರೆ ಅದಕ್ಕೆ ಜೆಡಿಎಸ್ ಅವರು ಸೇರಿದ್ದಾರೆ. ಇದಕ್ಕಾಗಿ ರಾಜ್ಯಪಾಲರ ಕಚೇರಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿಯ 67 ಶಾಸಕರೆಲ್ಲಿ? ಕಾಂಗ್ರೆಸ್ ನ 137 ಶಾಸಕರೆಲ್ಲಿ ಎಂದು ತಿರುಗೇಟು ನೀಡಿದರು.
ಡಿಡಿಪಿಐ, ಬಿಇಒ ವರ್ಗಾವಣೆಗೆ ಲಂಚ ನಿಗದಿಪಡಿಸಲಾಗಿದೆ ಎಂಬ ವಿಜಯೇಂದ್ರ ಆರೋಪ ವಿಚಾರಕ್ಕೆ ಉತ್ತರಿಸಿದ ಸಚಿವ ಅವರ ಅಪ್ಪ ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಎಷ್ಟು ಲಂಚ ಹೊಡೆದಿದ್ದಾರೆ? ಯಡಿಯೂರಪ್ಪನವರು ಯಾಕೆ ಜೈಲಿಗೆ ಹೋದರು? ಇದೇ ವಿಜಯೇಂದ್ರನ ಸಹವಾಸಕ್ಕೆ ಯಡಿಯೂರಪ್ಪ ಜೈಲಿಗೆ ಹೋದರು ಎಂದು ಕುಟುಕಿದರು.
ಪ್ರತಿ ಸಾರಿ ಮೂರು, ಮೂರುವರೆ ವರ್ಷವಷ್ಟೇ ಯಡಿಯೂರಪ್ಪ ಅಧಿಕಾರದಲ್ಲಿರುತ್ತಾರೆ. ಅಷ್ಟಕ್ಕೂ ನಮಗ್ಯಾಕೆ ಪ್ರಶ್ನೆ ಕೇಳ್ತಿರಾ? ನಿಮ್ಮ ಪಕ್ಷದ ನಾಯಕ ಯತ್ನಾಳ್ ಗೆ ಉತ್ತರ ಕೊಡಿ. ಅವರೇನು ಹಿರಿಯರು ಅಂತೆ, ಹಿರಿಯರ ಕೈಯಲ್ಲಿ ಬೈಯಸಿಕೊಳ್ಳಲು ನಾಚಿಕೆ ಆಗಲ್ವಾ ಎಂದು ಖಾರವಾಗಿ ಪ್ರಶ್ನಿಸಿದರು.