ಬೆಂಗಳೂರು: ವಾಕಿಂಗ್ ಮಾಡುತ್ತಿದ್ದ ವೃದ್ದ ಮಹಿಳೆಯ ಮೇಲೆ ಬೀದಿನಾಯಿಗಳ ಹಿಂಡೊಂದು ಏಕಾಏಕಿ ದಾಳಿ ನಡೆಸಿದ್ದು, ಅಮಾನುಷವಾಗಿ ತಿಂದುಹಾಕಿರುವ ಘಟನೆ ಜಾಲಹಳ್ಳಿ ಏರ್ಫೋರ್ಸ್ ಕ್ಯಾಂಪಸ್‌ನಲ್ಲಿ ಬುಧವಾರ ನಡೆದಿದೆ.
ಸುಮಾರು 60 ವರ್ಷದ ಮಹಿಳೆ ಕ್ಯಾಂಪಸ್‌ನಲ್ಲಿ ವಾಕ್ ಮಾಡುತ್ತಿದ್ದ ಸಂದರ್ಭ 7-8 ಬೀದಿ ನಾಯಿಗಳು ಏಕಾಏಕಿ ದಾಳಿ ನಡೆಸಿವೆ. ಪರಿಣಾಮ ಮಹಿಳೆಯ ತಲೆ ಹಿಂಭಾಗ, ಮುಖ, ಕೈ ಹಾಗೂ ಕತ್ತಿನ ಭಾಗದಲ್ಲಿ ಗಂಭೀರವಾಗಿ ಗಾಯವಾಗಿದೆ. ಬಳಿಕ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮಹಿಳೆ ಮೃತಪಟ್ಟಿದ್ದಾರೆ.
ಮೃತ ಮಹಿಳೆಯ ಅಳಿಯ ಏರ್ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅಳಿಯ-ಮಗಳನ್ನ ಭೇಟಿಯಾಗಲು ಮಹಿಳೆ ಬಿಹಾರದಿಂದ ಬೆಂಗಳೂರಿಗೆ ಬಂದಿದ್ದರು. ಬುಧವಾರ ಬೆಳಗ್ಗೆ ವಾಕ್ ಮಾಡುವಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಮಹಿಳೆ ಮೃತದೇಹವನ್ನು ವೈದ್ಯರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಹಿಂದೆಯೂ ಇದೇ ಕ್ಯಾಂಪಸ್‌ನಲ್ಲಿ ನಾಲ್ಕೈದು ಜನರ ಮೇಲೆ ನಾಯಿಗಳು ದಾಳಿ ನಡೆಸಿತ್ತು ಎಂದು ಮೂಲಗಳು ತಿಳಿಸಿವೆ.