ಬೆಂಗಳೂರು: ಕಾಂಗ್ರೆಸ್’ನ ಸಚಿವ ಬೈರತಿ ಸುರೇಶ್ ಮಗನ ಜೊತೆ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಮಗಳ ನಿಶ್ಚಿತಾರ್ಥ ಕಾರ್ಯಕ್ರಮ ಇಂದು ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಅದ್ಧೂರಿಯಾಗಿ ನಡೆದಿದ್ದು ಮುಂದಿನ ವರ್ಷ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ.
ಬೈರತಿ ಸುರೇಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದಾರೆ. ಇನ್ನು ಯಲಹಂಕ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಹಾಗೂ ಬೈರತಿ ಸುರೇಶ್ ಅವರು ಬೀಗರಾಗುತ್ತಿದ್ದಾರೆ. ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವಾರು ನಾಯಕರು ನಿಶ್ಚಿತಾರ್ಥದಲ್ಲಿ ಪಾಲ್ಗೊಂಡು ಹೊಸ ಜೋಡಿಗೆ ಶುಭ ಹಾರೈಸಿದರು.
ಬೈರತಿ ಸುರೇಶ್ ಪುತ್ರ ಸಂಜಯ್ ಹಾಗೂ ವಿಶ್ವನಾಥ್ ಪುತ್ರಿ ಅಪೂರ್ವ ಪರಸ್ಪರ ಪ್ರೀತಿಸುತ್ತಿದ್ದರು. ಈ ಪ್ರೀತಿಗೆ ಪೋಷಕರು ಸಮ್ಮತಿ ಸೂಚಿಸಿದ್ದು ಮದುವೆ ನಿಶ್ಚಯಿಸಿದ್ದಾರೆ. ಅದರಂತೆ 2025ರ ಫೆಬ್ರವರಿಯಲ್ಲಿ ಅರಮನೆ ಮೈದಾನದಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದೆ. ಇನ್ನು ನಿಶ್ಚಿತಾರ್ಥದಲ್ಲಿ ಭಾಗಿಯಾಗಿದ್ದ ತಾವರ್ ಚಂದ್ ಗೆಹ್ಲೋಟ್ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಒಟ್ಟಿಗೆ ಊಟ ಮಾಡಿದ್ದು ವಿಶೇಷವಾಗಿತ್ತು.