ಹೊಸದಿಲ್ಲಿ: ರೈತರ ಪ್ರತಿಭಟನೆಯ ಕುರಿತು ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರ ವಿವಾದಾತ್ಮಕ ಹೇಳಿಕೆಗಳಿಗೆ ಬಿಜೆಪಿ ಸೋಮವಾರ ಅಸಮ್ಮತಿ ವ್ಯಕ್ತಪಡಿಸಿದೆ.
ಭವಿಷ್ಯದಲ್ಲಿ ಈ ರೀತಿಯ ಹೇಳಿಕೆಗಳನ್ನು ನೀಡದಂತೆ ಅವರಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದೆ.
‘ಉನ್ನತ ನಾಯಕತ್ವವು ಸಾಕಷ್ಟು ಬಲವಾಗಿರದಿದ್ದರೆ ರೈತರ ಪ್ರತಿಭಟನೆಗಳು ದೇಶದಲ್ಲಿ ಬಾಂಗ್ಲಾದೇಶದಂತಹ ಪರಿಸ್ಥಿತಿಗೆ ಕಾರಣವಾಗಬಹುದು’ ಎನ್ನುವ ಮೂಲಕ ಕಂಗನಾ ವಿವಾದವನ್ನು ಹುಟ್ಟುಹಾಕಿದ್ದರು.
ಮಂಡಿ ಸಂಸದೆ ಕಂಗನಾ ಎಕ್ಸ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಈಗ ರದ್ದಾದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯ ಸಂದರ್ಭದಲ್ಲಿ “ದೇಹಗಳು ನೇತಾಡುತ್ತಿವೆ ಮತ್ತು ಅತ್ಯಾಚಾರಗಳು ನಡೆಯುತ್ತಿವೆ” ಎಂದು ಆರೋಪಿಸಿದ್ದರು.
ರೈತರ ಆಂದೋಲನದ ಕುರಿತು ಕಂಗನಾ ಹೇಳಿಕೆಗೆ ಬಿಜೆಪಿ ಅಸಮ್ಮತಿ ವ್ಯಕ್ತಪಡಿಸಿ, ನೀತಿ ವಿಷಯಗಳ ಬಗ್ಗೆ ಮಾತನಾಡಲು ಅವರಿಗೆ ಅಧಿಕಾರವಿಲ್ಲ. ಕಂಗನಾ ರಣಾವತ್ ನೀಡಿರುವ ಹೇಳಿಕೆ ಪಕ್ಷದ ಅಭಿಪ್ರಾಯವಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದೆ.
“ಭಾರತೀಯ ಜನತಾ ಪಕ್ಷದ ಪರವಾಗಿ, ಭವಿಷ್ಯದಲ್ಲಿ ಅಂತಹ ಯಾವುದೇ ಹೇಳಿಕೆಗಳನ್ನು ನೀಡದಂತೆ ಕಂಗನಾ ಅವರಿಗೆ ನಿರ್ದೇಶನ ನೀಡಲಾಗಿದೆ. ಬಿಜೆಪಿ ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್’ ಮತ್ತು ಸಾಮಾಜಿಕ ಸಾಮರಸ್ಯದ ತತ್ವಗಳನ್ನು ಅನುಸರಿಸಲು ಬದ್ಧವಾಗಿದೆ” ಎಂದು ಹೇಳಿದೆ.