ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಕನ್ನಡ ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ರಾಜಾತಿಥ್ಯ ಸಿಗುತ್ತಿರುವ ವಿಚಾರ ಇದೀಗ ಜೈಲು ಅಧಿಕಾರಿಗಳಿಗೆ ಮುಳುವಾಗಿದೆ. ರಾಜ್ಯ ಗೃಹ ಸಚಿವ ಜಿ ಪರಮೇಶ್ವರ್ ಅವರು ಇದೀಗ ಏಳು ಮಂದಿ ಜೈಲು ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪರಮೇಶ್ವರ್ ಅವರು, ನಿನ್ನೆ ಸಂಜೆ ಈ ಬಗ್ಗೆ ಸುದ್ದಿ ಬಂತು. ಮಧ್ಯರಾತ್ರಿಯವರೆಗೆ ಈ ಬಗ್ಗೆ ಆಂತರಿಕ ತನಖೆ ನಡೆಸಲಾಗಿದೆ. ಜೈಲಿನಲ್ಲಿರುವ ದರ್ಶನ್ ಸ್ನೇಹಿತರ ಜತೆ ಸೇರಿ ಟೀ ಕುಡಿಯುವ ಫೋಟೋ ವೈರಲ್ ಆಗಿದೆ. ಪ್ರಕರಣ ಸಂಬಂಧ ಏಳು ಜನ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದರು.
ಘಟನೆ ಹೇಗೆ ನಡೆಯಿತು ಎಂದು ವರದಿ ಕೇಳಿದ್ದೇನೆ. ಇದರಲ್ಲಿ ಏಳು ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ವರದಿ ಬಂದಿದೆ. ಶರಣ ಬಸವ ಅಮೀನಗಡ, ಪ್ರಭು, ತಿಪ್ಪೇಸ್ವಾಮಿ, ವೆಂಕಪ್ಪ ಕೊರ್ಟಿ, ಸಂಪತ್ ಕುಮಾರ್, ಶ್ರೀಕಾಂತ್ ತಲವಾರ್, ಬಸಪ್ಪ ತೇಲಿ ಇವರನ್ನು ಅಮಾನತು ಮಾಡಿದ್ದೇವೆ. ಜೈಲು ಸೂಪರಿಂಟೆಂಡೆಂಟ್ ಅವರನ್ನು ವರ್ಗಾವಣೆ ಮಾಡುತ್ತೇವೆ. ಈ ರೀತಿಯ ಘಟನೆ ನಡೆಯಬಾರದು. ಹಿರಿಯ ಅಧಿಕಾರಿಗಳು ತಪ್ಪು ಮಾಡಿದ್ದರೆ ಅವರ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವರು ಹೇಳಿದರು.
ಎಲ್ಲಾ ಜೈಲುಗಳಲ್ಲಿ ಜಾಮರ್, ಕ್ಯಾಮರಾ ಹಾಕಿದರೂ ಇಂತಹ ಘಟನೆ ನಡೆಯುವುದು ಸರಿಯಲ್ಲ. ಫೋನ್ ಎಲ್ಲಿಂದ ಬಂತು, ಸಿಗರೇಟ್ ಹೇಗೆ ಬಂತು ಎನ್ನುವ ಬಗ್ಗೆ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ. ಜೈಲಿನಲ್ಲಿ 24 ಗಂಟೆ ಮಾನಿಟರ್ ನಡೆಯುತ್ತಿರುತ್ತದೆ. ಪ್ರಕರಣದಿಂದ ಸರ್ಕಾರಕ್ಕೆ ಯಾವುದೇ ಮುಜುಗರ ಆಗಿಲ್ಲ. ಯಾರು ತಪ್ಪು ಮಾಡಿದ್ದಾರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.