ನವದೆಹಲಿ: ಪ್ರಸ್ತಾವಿತ ಯುರೋ-7 ಮಾನದಂಡಗಳಂತೆ ದೇಶದಲ್ಲಿಯೂ ಕೂಡ ಬಿಎಸ್-7 ವಾಹನಗಳ ತಯಾರಿಕೆ ಶುರು ಮಾಡಿ. ಹೀಗೆಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಒತ್ತಾಯಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ದೇಶೀಯ ವಾಹನ ಉತ್ಪಾದಕರು ತಮ್ಮ ಉತ್ಪನ್ನಗಳನ್ನು ಐರೋಪ್ಯ ಒಕ್ಕೂಟಗಳಿಗೆ ರಫ್ತು ಮಾಡುವ ನಿಟ್ಟಿನಲ್ಲಿ ಬಿಎಸ್-6ನಿಂದ ಬಿಎಸ್-7 ಮೇಲ್ದರ್ಜೆಗೆ ಏರಿಸಿಕೊಳ್ಳುವುದು ಅಗತ್ಯವಾಗಿದೆ. 2025ರ ಜುಲೈನಿಂದ ಹೊಸ ಕಾರುಗಳು ಮತ್ತು ಬಸ್‌ಗಳು ಹಾಗೂ 2027ರ ಜುಲೈನಿಂದ ಹೊಸ ಟ್ರಕ್‌ಗಳು ಮತ್ತು ಬಸ್‌ಗಳು ಯೂರೊ-7 ನಿಯಮಗಳನ್ನು ಪೂರೈಸಬೇಕು ಎಂದು ಐರೋಪ್ಯ ಒಕ್ಕೂಟದ ಸಮಿತಿ ಶಿಫಾರಸು ಮಾಡಿದೆ ಎಂದಿದ್ದಾರೆ.
ಅದಕ್ಕೆ ಅನುಸಾರವಾಗಿ ದೇಶದಲ್ಲಿ ಬಿಎಸ್-7 ಮಾಲಿನ್ಯ ಹೊರಸೂಸುವಿಕೆ ಮಾನದಂಡಗಳನ್ನು ರೂಪಿಸುವ ನಿಟ್ಟಿನಲ್ಲಿ ರಸ್ತೆ ಸಂಚಾರ ಸಚಿವಾಲಯ ಕಾರ್ಯ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.