Breaking
Sun. Sep 8th, 2024

ಶಿವಮೊಗ್ಗ: ಮದುವೆಯಾಗುವುದಾಗಿ ವಂಚಿಸಿ ಅತ್ಯಾಚಾರ ಆರೋಪ; ಬಿಜೆಪಿ ಮುಖಂಡ ಬಂಧನ

By Mooka Nayaka News Aug 7, 2024
Spread the love

ಶಿವಮೊಗ್ಗ: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ ಆಕೆಯಿಂದಲೇ ಲಕ್ಷ ಲಕ್ಷ ಹಣ ಪಡೆದು ವಂಚಿಸಿ ತಲೆಮರೆಸಿಕೊಂಡಿದ್ದ ಬಿಜೆಪಿ ಮಾಧ್ಯಮ ಪ್ರಮುಖನೋರ್ವನನ್ನು ಶಿವಮೊಗ್ಗ ಮಹಿಳಾ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಆರೋಪಿಯನ್ನು ಶಿವಮೊಗ್ಗ ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದ ಮಾಜಿ ಸಂಚಾಲಕ ಕಲ್ಯಾಣಿ ಶರತ್ ಎಸ್ ವಿ ಎಂದು ಗುರ್ತಿಸಲಾಗಿದೆ.

ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಶರತ್ ಕಲ್ಯಾಣಿಯನ್ನು ಮಹಿಳಾ ಠಾಣೆ ಇನ್ಸ್ ಪೆಕ್ಟರ್ ನೇತೃತ್ವದ ಮೂರು ಜನರ ತಂಡ ಕಾರ್ಯಾಚರಣೆ ನಡೆಸಿ ಬಿಜಾಪುರ ತಾಲೂಕಿನಲ್ಲಿ ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರು ಶರತ್ ಅವರನ್ನು ಸಾಮಾಜಿಕ ಮಾಧ್ಯಮ ಸಂಚಾಲಕ ಸ್ಥಾನದಿಂದ ವಜಾಗೊಳಿಸಿದ್ದಾರೆ.

ಟ್ರಾವೆಲ್ ಏಜೆಂಟ್ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ 43 ವರ್ಷದ ಮಹಿಳೆ, ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

43 ವರ್ಷದ ವಿಚ್ಛೇದಿತ ಮಹಿಳೆಗೆ 2023 ರ ಆಗಸ್ಟ್ 31ರಿಂದ ಶರತ್ ಪರಿಚಯವಿತ್ತು ಎನ್ನಲಾಗಿದೆ. ತನಗೆ ಮದುವೆಯಾಗಿರುವುದನ್ನು ಮಹಿಳೆಯಿಂದ ಮುಚ್ಚಿಟ್ಟಿದ್ದ ಶರತ್, ತಾನಿನ್ನೂ ಅವಿವಾಹಿತನಾಗಿದ್ದು ನಿನ್ನನ್ನು ಪ್ರೀತಿಸುತ್ತೇನೆ, ಮದುವೆಯಾಗಿ ನಿನಗೆ ಬಾಳು ಕೊಡುತ್ತೇನೆ ಎಂದು ನಂಬಿಸಿ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.

ಏಳೆಂಟು ತಿಂಗಳಿಂದ ನಿರಂತರ ಸಂಪರ್ಕದಲ್ಲಿದ್ದ ಕಾರಣ ತನ್ನನ್ನು ಮದುವೆಯಾಗು ಎಂದು ಮಹಿಳೆ ಒತ್ತಾಯಿಸಿದಾಗ, ನನಗೆ ಮನೆಯಲ್ಲಿ ಹಣಕಾಸಿನ ಸಮಸ್ಯೆ ಇದೆ. ಅದು ಬಗೆಹರಿದ ನಂತರ ಮದುವೆಯಾಗುತ್ತೇನೆ ಎಂದು ಭರವಸೆ ನೀಡಿದ್ದ. ಅಲ್ಲದೆ ಈಗ ನನಗೆ ಸಹಾಯ ಮಾಡು ಎಂದು ಕೇಳಿದಾಗ ಮಹಿಳೆಯು (ಹಲವು ಬಾರಿ) ಒಟ್ಟು ನಾಲ್ಕು ಲಕ್ಷ ಹಣವನ್ನು ಶರತ್’ಗೆ ನೀಡಿದ್ದರು ಎನ್ನಲಾಗಿದೆ.

ಬಳಿಕ ಮದುವೆಗೆ ಮಹಿಳೆಯ ಒತ್ತಾಯ ಮುಂದುವರಿದಾಗ ಶರತ್ ಆಕೆಯ ಮನೆ ಕಡೆ ಹೋಗುವುದನ್ನು ನಿಲ್ಲಿಸಿದ್ದಲ್ಲದೆ ಫೋನ್ ಸಂಪರ್ಕ ಕೂಡ ಕಡಿದುಕೊಂಡಿದ್ದ. ಈ ಬಗ್ಗೆ ಕೇಳಲು ಮಹಿಳೆ ಗುಂಡಪ್ಪ ಶೆಡ್ಡಿನಲ್ಲಿರುವ ಶರತ್ ಕಲ್ಯಾಣಿಯ ಮನೆಗೆ ಹೋದಾಗ ಆತನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಯಿಂದ ಹೊಡೆದು ಇನ್ನೊಮ್ಮೆ ನಮ್ಮ ಮನೆ ಬಳಿ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.

 

 

Related Post