ಮಂಡ್ಯ: ವೋಟ್ ಹಾಕಿಲ್ಲ ಅಂತಾ ಮುಸ್ಲಿಮರಿಗೆ ಎಚ್‌ಡಿ ಕುಮಾರಸ್ವಾಮಿ ಧಮ್ಕಿ ಹಾಕಿದ್ದಾರೆ. ಮುಸ್ಲಿಮರು ಇಲ್ಲ ಅಂದಿದ್ರೆ ಎಚ್‌ಡಿ ಕುಮಾರಸ್ವಾಮಿ ಎಂಎಲ್‌ಎ ಆಗ್ತಿರಲಿಲ್ಲ, ಅವರ ತಂದೆ ಸಿಎಂ ಆಗ್ತಿರಲಿಲ್ಲ. ಅಧಿಕಾರ ಸಿಗ್ತಿರಲಿಲ್ಲ ಎಂದು ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ರಾಮನಗರದಲ್ಲಿ ಭಾನುವಾರ ಮಾತನಾಡಿದ್ದ ಎಚ್‌ಡಿ ಕುಮಾರಸ್ವಾಮಿ ಅವರು ಶಾಸಕರ ಆಯ್ಕೆ ವಿಚಾರದಲ್ಲಿ ಮುಸ್ಲಿಮರಿಗೆ ಕಿವಿ ಮಾತು ಹೇಳಿದ್ದರು. ಉತ್ತಮರನ್ನು ಆಯ್ಕೆ ಮಾಡಿ ಕಳುಹಿಸಬೇಕು ಎಂದಿದ್ದರು. ಈ ಬಗ್ಗೆ ಡಿಕೆ ಶಿವಕುಮಾರ್ ಅವರು ಸೋಮವಾರ ಮಂಡ್ಯ ಜಿಲ್ಲೆಯ ಮದ್ಧೂರಿನಲ್ಲಿ ನಡೆದ ಕಾಂಗ್ರೆಸ್ ಜನಾಂದೋಲನ ಸಭೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಧಮ್ಕಿಗೆ ಮುಸಲ್ಮಾನರು ಹೆದರಲ್ಲ
ನಾವು ಭಾವನೆ ಮೇಲೆ ರಾಜಕಾರಣ ಮಾಡಲ್ಲ ಬದುಕಿನ ಮೇಲೆ ರಾಜಕಾರಣ ನಿಂತಿದೆ. ಮುಸ್ಲಿಮರು ಇಲ್ಲ ಎಂದಿದ್ರೆ ನೀವು ಎಂಎಲ್‌ಎ ಆಗ್ತಿರಲಿಲ್ಲ, ನಿಮ್ಮ ತಂದೆ ಸಿಎಂ ಆಗ್ತಿರಲಿಲ್ಲ. ಈಗ ಮುಸ್ಲಿಮರಿಗೆ ವೋಟ್ ಹಾಕಿಲ್ಲ ಅಂತಾ ಧಮ್ಕಿ ಹಾಕ್ತಿದ್ದೀರಾ.
ನಿಮ್ಮ ತಂದೆ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೀನಿ ಎಂದಿದ್ದು ನೆನೆಸಿಕೊಳ್ಳಿ. ಬಿಜೆಪಿಗೆ ಹೋಗಿ ನೀವು ಮಂತ್ರಿಯಾದ ತಕ್ಷಣ ಯಾರನ್ನು ಸಂವಿಧಾನದಿಂದ ಓಡಿಸಲು ಆಗಲ್ಲ. ನಿನ್ನ ಧಮ್ಕಿಗೆ ಮುಸಲ್ಮಾನರು ಹೆದರಲ್ಲ ಎಂದರು.
ನಿಮ್ಮ ಅಪ್ಪನನ್ನು ಜೈಲಿಗೆ ಯಾಕೆ ಕಳುಹಿಸಿದೆ
ಬಿವೈ ವಿಜಯೇಂದ್ರ ಹೇಳುತ್ತಾನೆ ಭ್ರಷ್ಟಾಚಾರದ ಪಿತಾಮಹಾ ನಾನು ಎಂದು. ನೀನು ಮೊದಲು ಹೇಳಪ್ಪ, ನೀನು ನಿಮ್ಮ ಅಪ್ಪನನ್ನು ಯಾಕೆ ಜೈಲಿಗೆ ಕಳುಹಿಸಿದೆ? ರಾಜೀನಾಮೆ ಕೊಡಿಸಿದೆ? ಏನಾಯಿತು, ಎಲ್ಲಿ ಬಂತು? ಏಕೆ ಇದೆಲ್ಲಾ ಆಯಿತು ಇದರ ಲೆಕ್ಕಾಚಾರ ಮೊದಲು ನೀಡು. ಮೊದಲು ನಿಮ್ಮ ಪಕ್ಷದ ಯತ್ನಾಳ್, ಗೂಳಿಹಟ್ಟಿ ಶೇಖರ್‌ಗೆ ಉತ್ತರ ಕೊಡಿ ಆನಂತರ ನನಗೆ ಕೊಡುವಿರಂತೆ” ಎಂದು ಹೇಳಿದರು.