ಶಿವಮೊಗ್ಗ: ನಾಮಕರಣದ ವಿಚಾರದಲ್ಲಿ ವಿವಾದಿತ ಕೂಸಾಗಿದ್ದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಅಂತೂ ಇಂತೂ ಹೊಸ ಹೆಸರು ಸಿಗಲಿದೆ. ರಾಜ್ಯದ ನಾಲ್ಕು ವಿಮಾನ ನಿಲ್ದಾಣಗಳ ನಾಮಕರಣಕ್ಕೆ ಹೆಸರು ಸೂಚಿಸಿ ಬಹುತೇಕ ಅಂತಿಮಗೊಳಿಸಲಾಗಿದ್ದು ಅದರಲ್ಲಿ ಶಿವಮೊಗ್ಗದ ವಿಮಾನ ನಿಲ್ದಾಣವೂ ಒಂದಾಗಿದ್ದು, ಅದಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನೇ ಇಡಲು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಬಹುತೇಕ ನಿರ್ಧರಿಸಿದೆ.
ಇದೇ ವೇಳೆ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತ್ತೊಂದು ವಿಮಾನ ನಿಲ್ದಾಣ ತಲೆಯೆತ್ತುವ ಸಾಧ್ಯತೆಗಳಿವೆ.
ರಾಜ್ಯದ ಮೂರನೇ ಉದ್ದದ ರನ್‌ವೇ ಹೊಂದಿರುವ ಶಿವಮೊಗ್ಗ ವಿಮಾನ ನಿಲ್ದಾಣ 2023ರ ಫೆಬ್ರವರಿ 27ರಂದು ಲೋಕಾರ್ಪಣೆಗೊಂಡಿತ್ತು. ಆರಂಭದಿಂದಲೇ ನಾಮಕರಣದ ವಿಚಾರ ಸಾಕಷ್ಟು ಜಿಜ್ಞಾಸೆಗೆ ಕಾರಣವಾಗಿತ್ತು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ‘ಬಿ.ಎಸ್.ಯಡಿಯೂರಪ್ಪ’ ಹೆಸರನ್ನು ಘೋಷಿಸಿದ್ದರು.
ಅದಾದ ಬಳಿಕ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ಬಳಿಕ ಖುದ್ದು ಯಡಿಯೂರಪ್ಪನವರೇ ತಮ್ಮ ಹೆಸರು ಬೇಡ ಎಂದು ಮನವಿ ಮಾಡಿದ್ದರು. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಡೆದಿದ್ದ ಸಂಪುಟ ಸಭೆಯೊಂದರಲ್ಲಿ ‘ಕುವೆಂಪು’ ಅವರ ಹೆಸರು ಅಂತಿಮಗೊಳಿಸಿ ಶಿಫಾರಸು ಮಾಡಲಾಗಿತ್ತು. ಅದೇ ಹೆಸರು ನಿಲ್ದಾಣಕ್ಕೆ ಇಡಲಾಗುತ್ತಿದೆ.
ಈ ವಿಷಯವನ್ನು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, “ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರಿಡುವುದು ಬಹುತೇಕ ಖಚಿತವಾಗಿದೆ. ಯಾವ ಹೆಸರನ್ನಿಡಬೇಕು ಎಂಬುದನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ತಿಳಿಸುತ್ತದೆ. ರಾಜ್ಯ ಸರ್ಕಾರ ಸೂಚಿಸಿದ ಹೆಸರಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದರೂ, ಅಂತಿಮ ನಿರ್ಧಾರವನ್ನು ರಾಜ್ಯ ಸರ್ಕಾರದ ಮರ್ಜಿಗೆ ಬಿಟ್ಟಿರುತ್ತದೆ. ಶಿವಮೊಗ್ಗ ವಿಮಾನ ನಿಲ್ದಾಣದ ಕಥೆಯೂ ಅದೇ ಆಗಿದೆ. ಕುವೆಂಪು ಹೆಸರಿಡಲು ಕೇಂದ್ರ ಸರ್ಕಾರ ಒಪ್ಪಿದೆಯಾದರೂ, ಅಂತಿಮ ನಿರ್ಧಾರ ರಾಜ್ಯ ಸರ್ಕಾರದ ಕೈಯ್ಯಲ್ಲಿದೆ. ಸಿದ್ದರಾಮಯ್ಯನವರ ಸರ್ಕಾರವೇ ಕುವೆಂಪು ಹೆಸರನ್ನು ಶಿಫಾರಸ್ಸು ಮಾಡಿರುವುದರಿಂದ ಅದೇ ಹೆಸರೇ ಬಹುತೇಕ ಫೈನಲ್ ಆಗಲಿದೆ’’ ಎಂದು ಹೇಳಿದ್ದಾರೆ.
ಈ ನಡುವೆ ಸಂಸದ ಬಿ.ವೈ.ರಾಘವೇಂದ್ರ ಅವರು ಇತ್ತೀಚೆಗೆ ಕೇಂದ್ರ ವಿಮಾನಯಾನ ಸಚಿವರನ್ನು ಭೇಟಿ ನೀಡಿದ್ದು, ಶಿವಮೊಗ್ಗ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಬೈಂದೂರಿನಲ್ಲಿಮತ್ತೊಂದು ವಿಮಾನ ನಿಲ್ದಾಣ ಆರಂಭಿಸುವ ಪ್ರಸ್ತಾವನೆ ನೀಡಿದ್ದಾರೆ. ಅದಕ್ಕೆ ಸಚಿವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಕುರಿತು ರಾಜ್ಯ ಸರಕಾರ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿದ್ದಲ್ಲಿಶೀಘ್ರವೇ ಬೈಂದೂರಲ್ಲೂವಿಮಾನ ಹಾರಾಟದ ಕನಸು ನನಸಾಗಲಿದೆ. ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಬರುವುದರಿಂದ ಅನುಕೂಲವಾಗಲಿದೆ. ಮಲೆನಾಡು- ಕರಾವಳಿ ನಡುವೆ ವಾಯುಮಾರ್ಗ ಸಂಪರ್ಕ ಸಿಗಲಿದೆ.