ರಾಮನಗರ: ಸಿಎಂ ಸಿದ್ದರಾಮಯ್ಯ ಅವರಿಗೆ ಮಾನ ಮರ್ಯಾದೆ ಇದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಗ್ರಹಿಸಿದರು.
ರಾಮನಗರದಲ್ಲಿ ನಡೆದ ಪಾದಯಾತ್ರೆಯ ಕಾರ್ನರ್ ಸಭೆಯಲ್ಲಿ ಮಾತನಾಡಿದ ಅವರು, ಮುಡಾ ಅಕ್ರಮ ಅಕ್ಷಮ್ಯ ಅಪರಾಧ ಅನ್ನಿಸಿದರೆ ರಾಜೀನಾಮೆ ಕೊಡಬೇಕು. ಇಲ್ಲಾಂದ್ರೆ ಜನ ಸಹಿಸಲ್ಲ. ಕಾಂಗ್ರೆಸ್ ಸರ್ಕಾರ ಮುಂದುವರಿದರೆ ರಾಜ್ಯದ ಹಿತಕ್ಕೆ ಮಾರಕ. ಮಾನ ಮರ್ಯಾದೆ ಇದ್ದರೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಮರ್ಯಾದೆ ಉಳಿಯಬಹುದು ಎಂದರು.
ನೈತಿಕತೆ ಕಾಂಗ್ರೆಸ್ ನಾಯಕರಿಗೆ ಇದ್ಯಾ? : ರಾಜ್ಯದ ಸಿಎಂ ದೊಡ್ಡ ಹಗರಣದಲ್ಲಿ ಸಿಕ್ಕಾಕೊಂಡಾಗ ಅವರ ಪರವಾಗಿ ಮಾತನಾಡುವ ನೈತಿಕತೆ ಕಾಂಗ್ರೆಸ್ ನಾಯಕರಿಗೆ ಇದ್ಯಾ? ಸಿಎಂ 60 ಕೋಟಿ ಬೆಲೆಬಾಳುವ ಜಮೀನು ಲೂಟಿ ಮಾಡಿದ್ದಾರೆ. ಇದು ಕಾಂಗ್ರೆಸ್ ನಾಯಕರಿಗೆ ಸಹಮತ ಇದ್ಯಾ? ಆದಷ್ಟು ಬೇಗ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಜನ ತೀರ್ಮಾನ ಮಾಡಿದ್ದಾರೆ ಎಂದರು.
ಕ್ಷಮಿಸಲು ಸಾಧ್ಯವಿಲ್ಲ : ಮೈಸೂರಿನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನ ಸೇರಲಿದ್ದಾರೆ. ಬಿಜೆಪಿ ಜೆಡಿಎಸ್ ಹೊಂದಾಣಿಕೆಯಿಂದ ಕರ್ನಾಟಕ ರಾಜ್ಯದಲ್ಲಿ ಮತ್ತೊಮ್ಮೆ ಸರ್ಕಾರ ರಚನೆ ಮಾಡ್ತೇವೆ. ಇದನ್ನು ತಡೆಯಲು ಸಾಧ್ಯವಿಲ್ಲ. ಸಿದ್ದರಾಮಯ್ಯಗೆ ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಸಿದ್ದರಾಮಯ್ಯ ನಿವೇಶನ ಪಡೆದಿದ್ದು ಅಕ್ಷಮ್ಯ. ಇದನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಮೈಸೂರು ತಲುಪೋದರ ಒಳಗೆ ರಾಜೀನಾಮೆ ಕೊಡಿ : ಕಾಂಗ್ರೆಸ್ ಪಕ್ಷದ ಪ್ರಾಮಾಣಿಕ ಮುಖಂಡರು ಈ ಹಗರಣವನ್ನು ಒಪ್ಪುತ್ತಾರಾ? ಬಿಜೆಪಿ ಜೆಡಿಎಸ್ ಹೊಂದಾಣಿಕೆ ಮುಂದುವರಿಯಬೇಕು. ಮೈಸೂರು ತಲುಪೋದರ ಒಳಗಾಗಿ ಸಿಎಂ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.