ಧಾರವಾಡ : ಮೊನ್ನೆಯಷ್ಟೇ ಅವಕಾಶ ಸಿಕ್ಕರೆ ನಾನು ಕೂಡ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿದ್ದ ಹಿರಿಯ ಕಾಂಗ್ರೆಸ್ ಮುಖಂಡ ಆರ್.ವಿ.ದೇಶಪಾಂಡೆ ಇದೀಗ, ಕಾಂಗ್ರೆಸ್ ಸರ್ಕಾರದ ಐದು ವರ್ಷಗಳ ಅವಧಿ ಮುಗಿಯುವ ವರೆಗೂ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಮುಂದುವರೆಯುತ್ತಾರೆ ಎಂದು ಹೇಳಿದ್ದಾರೆ.
ಬುಧವಾರ ಇಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿ, ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರಲಿದ್ದು, ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಕೂಡ ಖುಷಿಯಿಂದ ಸಾತ್ ನೀಡಿದ್ದಾರೆ. ನಾನು ಸಿಎಂ ರೇಸ್‌ನಲ್ಲಿ ಇಲ್ಲವೇ ಇಲ್ಲ. ನನ್ನ ರೇಸ್ ಈಗಿರುವಲ್ಲಿಗೆ ಮುಗಿದಿದೆ ಎಂದರು.
ನಾನು ಐವತ್ತು ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ನನ್ನ ತಲೆ ರಾಜಕೀಯದಲ್ಲೆ ಬೆಳ್ಳಗಾಗಿದೆ. ಮಾಧ್ಯಮಗಳು ಮತ್ತು ಪತ್ರಕರ್ತರು ನನ್ನನ್ನು ಎಷ್ಟೇ ಪ್ರಚೋದಿಸಿದರೂ ನಾನು ತಾಳ್ಮೆ ಕಳೆದುಕೊಳ್ಳುವುದಿಲ್ಲ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರಲಿದ್ದಾರೆ ಎಂದು ದೇಶಪಾಂಡೆ ಹೇಳಿದರು.