Trending

ವಯನಾಡು ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 66ಕ್ಕೆ ಏರಿಕೆ, ನಾಲ್ಕು ಗ್ರಾಮಗಳಲ್ಲಿ ಹಲವರು ಸಿಲುಕಿರುವ ಶಂಕೆ, ಸಿಎಂ ಜೊತೆ ಪ್ರಧಾನಿ ಚರ್ಚೆ

Spread the love

ವಯನಾಡ್: ಕೇರಳದ ವಯನಾಡ್ ಜಿಲ್ಲೆಯಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ಮಕ್ಕಳು ಸೇರಿದಂತೆ ಮೃತಪಟ್ಟವರ ಸಂಖ್ಯೆ 66ಕ್ಕೆ ಏರಿಕೆಯಾಗಿದೆ. ಹಲವು ಕುಟುಂಬಗಳು ಜಲಸಮಾಧಿಯಾಗಿವೆ.

ಕನಿಷ್ಠ 400ಕ್ಕೂ ಹೆಚ್ಚು ಕುಟುಂಬಗಳು ದುರಂತದಲ್ಲಿ ಸಿಲುಕಿವೆ ಎಂದು ಹೇಳಲಾಗುತ್ತದೆ. ಇಂದು ನಸುಕಿನ ಜಾವ ಭೂಕುಸಿತ ಸಂಭವಿಸಿದ್ದು, ಮನೆಗಳು ಮತ್ತು ಕುಟುಂಬಗಳು ಕೊಚ್ಚಿಕೊಂಡು ಹೋಗಿವೆ.

ಮುಂಡಕ್ಕೈ, ಚೂರಲ್ಮಾಲಾ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳು ಭೂಕುಸಿತದಿಂದ ಹಾನಿಗೊಳಗಾದ ಪ್ರದೇಶಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೋತುಕಲ್ ಗ್ರಾಮದ ಬಳಿಯ ನದಿಯ ದಡದಿಂದ ಐದು ವರ್ಷದ ಮಗು ಸೇರಿದಂತೆ ಮೂರು ಶವಗಳನ್ನು ಹೊರತೆಗೆಯಲಾಗಿದೆ. ಮುಂಡಕ್ಕೈ, ಚೂರಲ್ಮಲಾ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳು ಭೂಕುಸಿತದಿಂದ ಹಾನಿಗೊಳಗಾಗಿ ಸಂಪರ್ಕ ಕಡಿತಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂಕುಸಿತ ಪ್ರದೇಶಗಳಲ್ಲಿ ವಿಪತ್ತು ಪರಿಹಾರ ಕಾರ್ಯ ಪ್ರಗತಿಯಲ್ಲಿದೆ. ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳ, ಪೊಲೀಸ್ ಮತ್ತು ಅರಣ್ಯ, ಕಂದಾಯ ಮತ್ತು ಸ್ಥಳೀಯ ಸ್ವ-ಸರ್ಕಾರ ಇಲಾಖೆಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ವಯನಾಡ್ ಜಿಲ್ಲಾಧಿಕಾರಿ ಮೇಘಶ್ರೀ ಡಿ ಆರ್ ಹೇಳಿದ್ದಾರೆ.

ಸರ್ಕಾರಿ ಸಂಸ್ಥೆಗಳ ಜೊತೆಗೆ ಸ್ವಯಂಸೇವಕರು ಮತ್ತು ಸ್ಥಳೀಯ ನಿವಾಸಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಕರಿಸುತ್ತಿದ್ದಾರೆ. ಕರಮಂತೋಡು ನದಿಯ ಬಾಣಾಸುರ ಸಾಗರ ಅಣೆಕಟ್ಟಿನ ಶೆಟರ್ ನ್ನು ತೆರೆಯಲಾಗಿದ್ದು, ಕೆಳಭಾಗ ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುವವರಿಗೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ವಯನಾಡ್ ಭೂಕುಸಿತ ಪ್ರದೇಶದಲ್ಲಿ ಎಲ್ಲಾ ಸರ್ಕಾರಿ ಸಂಸ್ಥೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿಯ ವಿವಿಧ ಗುಡ್ಡಗಾಡು ಪ್ರದೇಶಗಳಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ನೂರಾರು ಮಂದಿ ಸಿಲುಕಿರುವ ಭೀತಿಯ ಹಿನ್ನೆಲೆಯಲ್ಲಿ ಎಲ್ಲಾ ಸರ್ಕಾರಿ ಸಂಸ್ಥೆಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ಹೇಳಿದ್ದಾರೆ.

ಕೇಂದ್ರದಿಂದ ಎಲ್ಲಾ ರೀತಿಯ ನೆರವು: ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ವಯನಾಡಿನ ಕೆಲವು ಭಾಗಗಳಲ್ಲಿ ಭೂಕುಸಿತದಿಂದ ಹಲವರು ಸಂಕಷ್ಟಕ್ಕೆ ಸಿಲುಕಿರುವ ವಿಷಯ ಕೇಳಿದೆ. ಕುಟುಂಬಸ್ಥರನ್ನು, ತಮ್ಮವರನ್ನು ಕಳೆದುಕೊಂಡವರಿಗೆ ನನ್ನ ಸಂತಾಪಗಳು, ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರದೊಂದಿಗೆ ಕೇಂದ್ರ ಎಲ್ಲಾ ರೀತಿಯಲ್ಲಿಯೂ ನೆರವು ಒದಗಿಸಲಿದೆ. ಪ್ರಸ್ತುತ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. ಕೇಂದ್ರದಿಂದ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುತ್ತೇನೆ ಎಂದಿದ್ದಾರೆ.

[pj-news-ticker]