ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ಎನ್ನುವ ವಿಚಾರ ಮುನ್ನಲೆಗೆ ಯಾವಗೆಲ್ಲಾ ಬರುತ್ತೋ, ಆವಾಗೆಲ್ಲಾ ಸಿದ್ದರಾಮಯ್ಯ ಬಲಿಷ್ಠರಾಗುತ್ತಾ ಸಾಗುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಐದು ವರ್ಷಗಳ ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯಲು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿದ್ದಾರೆ.
ಶನಿವಾರ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಎಐಸಿಸಿ ಕಾನೂನು ವಿಭಾಗದ ‘ಸಾಂವಿಧಾನಿಕ ಸವಾಲುಗಳು: ದೃಷ್ಟಿಕೋನಗಳು ಮತ್ತು ಮಾರ್ಗಗಳು’ ಸಮಾವೇಶದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಸಿದ್ದರಾಮಯ್ಯ ಅವರು ವೇದಿಕೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಯ್ಯ ಅವರು, ದಲಿತ, ಹಿಂದುಳಿದ ವಿಭಾಗದ ಪ್ರಬಲ ನಾಯಕ ನಾನೇ ಎಂದು ಹೇಳಿದರು. ಸಾಮಾಜಿಕ ನ್ಯಾಯವನ್ನು ಖಚಿತಪಡಿಸುವ ಮೂಲಕ ಅವರ ಹಿತಾಸಕ್ತಿಗಳನ್ನು ರಕ್ಷಿಸಿದ್ದೇನೆ ಎಂದು ತಿಳಿಸಿದರು.
ಸಮಾನತೆ ಮತ್ತು ಭ್ರಾತೃತ್ವದ ವಿಚಾರಗಳ ಆಧಾರದ ಮೇಲೆ ಸಾಮಾಜಿಕ ನ್ಯಾಯದ ಸಾಂವಿಧಾನಿಕ ಆದರ್ಶಗಳನ್ನು ಅನ್ವೇಷಿಸಲು ನಾವು ಪ್ರಾರಂಭಿಸಿರುವ ಹೊತ್ತಿನಲ್ಲಿಯೇ, ಭಾರತವನ್ನು ಸಾಮಾಜಿಕ ನ್ಯಾಯದ ಪಥದಲ್ಲಿ ನಡೆಸಿದ ನಮ್ಮ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಈ ರಾಷ್ಟ್ರದ ಅತ್ಯುತ್ತಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಉನ್ನತ ಆದರ್ಶಗಳ ಪರಂಪರೆಯನ್ನು ಹಿಂತಿರುಗಿ ನೋಡಬೇಕಿದೆ ಎಂದರು.
ಬಾಬಾ ಸಾಹೇಬರ ಮಾತುಗಳನ್ನು ನಾನು ಇಲ್ಲಿ ಉಲ್ಲೇಖಿಸುತ್ತೇನೆ, “ಭ್ರಾತೃತ್ವ ಎಂದರೆ ಎಲ್ಲಾ ಭಾರತೀಯರು ಒಂದೇ ಜನರು ಎಂಬ ಸಾಮಾನ್ಯ ಸಹೋದರತ್ವದ ಭಾವನೆ. ಸ್ವಾತಂತ್ರ್ಯದ ಸದ್ಗುಣಗಳು ಸ್ವತಃ ಭ್ರಾತೃತ್ವವನ್ನು ಸೃಷ್ಟಿಸುವುದಿಲ್ಲ. ವೈವಿಧ್ಯಮಯ ಸಮಾಜದಲ್ಲಿ, ಸಾಮಾಜಿಕ ವಿಭಜನೆಗಳನ್ನು ಮೀರಲು ಸಂವಿಧಾನವು ಸಾಮಾನ್ಯ ಸಹೋದರತ್ವವನ್ನು ಬೆಳೆಸುವ ಅಗತ್ಯವಿದೆ ಎಂದು ಹೇಳಿದರು.
