ಚೆನ್ನೈ: ಅತಿ ವೇಗ ಅಪಘಾತಕ್ಕೆ ಕಾರಣವೆಂದು ತಿಳಿದರೂ ಕೂಡ ಕೆಲವರು ವೇಗವಾಗಿ ವಾಹನಗಳನ್ನು ಚಲಾಯಿಸಿ ತಮ್ಮ ಜೀವದ ಜೊತೆಗೆ ಜನರ ಜೀವಕ್ಕೂ ಅಪಾಯವನ್ನು ತಂದೊಡ್ಡುತ್ತಾರೆ. ಇದೀಗ ಅಂತಹದೊಂದು ಅಪಘಾತದ ಘಟನೆ ಚೆನ್ನೈನಲ್ಲಿ ನಡೆದಿದ್ದು, ಈ ಅಪಘಾತದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಚೆನ್ನೈನಲ್ಲಿ ವೇಗವಾಗಿ ಬಂದ ಕಾರೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ 24 ವರ್ಷದ ಮಹಿಳಾ ಪೊಲೀಸ್ ಅಧಿಕಾರಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
ಚೆನ್ನೈ ಪೊಲೀಸರ ಪ್ರಕಾರ, ಚೆನ್ನೈನ ತಿರುಮುಲ್ಲೈವಾಯಲ್ ಪ್ರದೇಶದ ನಿವಾಸಿ ಪವಿತ್ರಾ ಅವರು ಪೋರೂರಿನ ಮಹಿಳಾ ಪೊಲೀಸ್ ಠಾಣೆಯಿಂದ ತಮ್ಮ ನಿವಾಸಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ವೇಗವಾಗಿ ಚಲಿಸುತ್ತಿದ್ದ ಕಾರನ್ನು ಚಾಲಕ ಟರ್ನ್ ಮಾಡಲು ಹೋದಾಗ ನಿಯಂತ್ರಣ ಕಳೆದುಕೊಂಡು ರಸ್ತೆಯ ಎದುರಿನಿಂದ ಬರುತ್ತಿದ್ದ ಪವಿತ್ರಾ ಅವರ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ.
ಪವಿತ್ರಾ ಅವರ ಸ್ಕೂಟರ್ ಹಿಂದೆ ಕಪ್ಪು ಕಾರೊಂದು ಬರುತ್ತಿತ್ತು. ಹಾಗೇ ಅದರ ಹಿಂದೆ ಗ್ಯಾಸ್ ಸಿಲಿಂಡರ್‌ಗಳನ್ನು ಹೊತ್ತಿರುವ ಟೆಂಪೊ ಬರುತ್ತಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೊದಲ್ಲಿ ಪವಿತ್ರಾ ಅವರ ಸ್ಕೂಟರ್ ಅನ್ನು ಮುಂಭಾಗದಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರ ಸ್ಕೂಟರ್ ಹಿಂದೆ ಇದ್ದ ಕಪ್ಪು ಕಾರಿಗೆ ಡಿಕ್ಕಿ ಹೊಡೆದು ಅವರು ಹಾರಿ ಹೋಗಿ 30 ಅಡಿ ದೂರಕ್ಕೆ ಬಿದ್ದಿರುವುದು ಕಂಡುಬಂದಿದೆ.
ಅದೃಷ್ಟವಶಾತ್, ಗ್ಯಾಸ್ ಸಿಲಿಂಡರ್‌ಗಳನ್ನು ಹೊಂದಿರುವ ಟೆಂಪೊ ಕಪ್ಪು ಕಾರಿನ ಹಿಂದೆ ಇದ್ದ ಕಾರಣ ದೊಡ್ಡ ಅಪಘಾತ ಸಂಭವಿಸಲಿಲ್ಲ ಎನ್ನಲಾಗಿದೆ. ಪವಿತ್ರಾ ಅವರ ಸ್ಥಿತಿ ಬಹಳ ಗಂಭೀರವಾಗಿದ್ದು, ತಕ್ಷಣ ಅವರನ್ನು ರಾಮಚಂದ್ರ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಬಳಿಕ ಚಾಲಕ ಪರಾರಿಯಾಗಿದ್ದಾನೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿ ವಾಹನವನ್ನು ವಶಪಡಿಸಿಕೊಂಡಿದ್ದಾರೆ.