ಚೆನ್ನೈ: ಲೋಕಸಭಾ ಚುನಾವಣೆಯ ಏಳು ಹಂತದ ಮತದಾನ ಮುಗಿದು, ಶನಿವಾರ ಸಂಜೆ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿದೆ. ಎಲ್ಲಾ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್ ಡಿಎ ಗೆ ಬಹುಮತ ಬರಲಿದೆ ಎನ್ನುವುದನ್ನು ಸೂಚಿಸುತ್ತಿದೆ. ಅದೇ ವೇಳೆ ದಕ್ಷಿಣದ ರಾಜ್ಯಗಳಾದ ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರಯಲಿದೆ ಎಂದು ಸಮೀಕ್ಷೆಗಳು ಸೂಚಿಸಿದೆ.
ತಮಿಳುನಾಡಿನ ಎರಡನೇ ಅತಿದೊಡ್ಡ ನಗರವಾದ ಕೊಯಮತ್ತೂರು 2024 ರ ಲೋಕಸಭಾ ಚುನಾವಣೆಯಲ್ಲಿ ಬಲಿಷ್ಠರ ಘರ್ಷಣೆಗೆ ಸಾಕ್ಷಿಯಾಗಿದೆ. ಮಾಜಿ ನಗರ ಮೇಯರ್ ಮತ್ತು ಡಿಎಂಕೆ ಅಭ್ಯರ್ಥಿ ಪಿ ಗಣಪತಿ ರಾಜ್‌ಕುಮಾರ್ ಮತ್ತು ಎಐಎಡಿಎಂಕೆ ನ ಸಿಂಗೈ ಜಿ ರಾಮಚಂದ್ರನ್ ವಿರುದ್ಧ ಬಿಜೆಪಿಯು ತನ್ನ ಫೈರ್‌ಬ್ರಾಂಡ್ ನಾಯಕ ಮತ್ತು ರಾಜ್ಯ ಘಟಕದ ಮುಖ್ಯಸ್ಥ ಕೆ ಅಣ್ಣಾಮಲೈ ಅವರನ್ನು ಕಣಕ್ಕಿಳಿಸಿದೆ.
ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಭವಿಷ್ಯವು ಪ್ರತಿಪಕ್ಷಗಳ ನೇತೃತ್ವದ ಇಂಡಿಯಾ ಬ್ಲಾಕ್ ಗೆಲುವನ್ನು ಸೂಚಿಸುತ್ತದೆ. ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಅಭ್ಯರ್ಥಿ ಪಿ ಗಣಪತಿ ರಾಜ್‌ಕುಮಾರ್ ಅವರು ಕೊಯಮತ್ತೂರು ಲೋಕಸಭಾ ಚುನಾವಣೆಯಲ್ಲಿ ಉತ್ತಮ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎನ್ನುತ್ತಿದೆ ಎಕ್ಸಿಟ್ ಪೋಲ್ ಸಮೀಕ್ಷೆ.
ಅಣ್ಣಾಮಲೈ ಅವರು ಇದನ್ನು ತಳ್ಳಿಹಾಕಿದ್ದಾರೆ. “ಜೂನ್ 4 ರಂದು ನಿಮಗೆ ಆಹ್ಲಾದಕರ ಆಶ್ಚರ್ಯವನ್ನು ನೀಡಲು ನಾವು ಇಷ್ಟಪಡುತ್ತೇವೆ. ನಾವು ಆರಾಮವಾಗಿ ಗೆಲ್ಲುತ್ತೇವೆ. ಮೋದಿ ಜಿ ದೊಡ್ಡ ಜನಾದೇಶದೊಂದಿಗೆ ಹಿಂತಿರುಗುತ್ತಾರೆ” ಎಂದು ಹೇಳಿದರು.
ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ನೇತೃತ್ವದಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಭಾರೀ ಪ್ರಚಾರ ನಡೆಸಿದರು. ದಕ್ಷಿಣದ ರಾಜ್ಯದಲ್ಲಿ ಕಮಳ ಅರಳಿಸಲು ಬಿಜೆಪಿ ಹೈಕಮಾಂಡ್ ಭಾರೀ ಕಸರತ್ತು ನಡೆಸಿದೆ. ಆದರೆ ಸ್ವತಃ ಅಣ್ಣಾಮಲೈ ಸೋಲು ಕಾಣಲಿದ್ದಾರೆ ಎಂಬ ಸಮೀಕ್ಷೆ ವರದಿ ಪಕ್ಷಕ್ಕೆ ಆತಂಕ ತರಿಸಿದೆ.