ಬೆಂಗಳೂರು: ಹಳೆಯ ಪಂಚಣಿ ಯೋಜನೆ ಜಾರಿ, ಏಳನೇ ವೇತನ ಆಯೋಗದ ಶಿಫಾರಸುಗಳ ಅನುಷ್ಠಾನ ಸೇರಿ ಕರ್ನಾಟಕ ಸರ್ಕಾರಿ ನೌಕರರ ಹಲವು ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಸರ್ಕಾರಿ ನೌಕರರ ಸಂಘವು ಆಗ್ರಹಿಸುತ್ತಲೇ ಇದೆ. ಇದರ ಬೆನ್ನಲ್ಲೇ, ಸರ್ಕಾರಿ ನೌಕರರ ಬೇಡಿಕೆ ಈಡೇರಿಸದಿದ್ದರೆ ಜುಲೈ 29ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಗುವುದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಅವರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಏಳನೇ ವೇತನ ಆಯೋಗ, ಒಪಿಎಸ್ ಸೇರಿ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಸರ್ಕಾರವು ಜುಲೈ 28ರೊಳಗೆ ಈಡೇರಿಸಬೇಕು. ಇಲ್ಲದಿದ್ದರೆ ನಾವು ಜುಲೈ 29ರಿಂದ ಮುಷ್ಕರ ಆರಂಭಿಸುತ್ತೇವೆ. ಕೆಲಸ ಮಾಡದೆ ಮನೆಯಲ್ಲಿಯೇ ಇರುತ್ತೇವೆ. ಎಲ್ಲವನ್ನೂ ಗಮನಿಸಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ. ರಾಜ್ಯ ಸರ್ಕಾರವು ಬೇಡಿಕೆ ಈಡೇರಿಸಿದ ಬಳಿಕವೇ ಕೆಲಸಕ್ಕೆ ಹಾಜರಾಗುತ್ತೇವೆ” ಎಂದು ತಿಳಿಸಿದರು.