Spread the love

ಡೆಹ್ರಾಡೂನ್: ಡೆಹ್ರಾಡೂನ್‌ನ ಶಾಲೆಯೊಂದು ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು ಕೇಳಲು ಶಾಲೆಗೆ ಬಾರದ ವಿದ್ಯಾರ್ಥಿಗಳಿಂದ 100 ರೂಪಾಯಿ ದಂಡ ವಸೂಲಿ ಮಾಡಿದ ಆರೋಪ ಕೇಳಿಬಂದಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಈ ಕುರಿತು ಶಾಲಾ ಆಡಳಿತ ಮಂಡಳಿಯು ಶಾಲೆಯ ವಾಟ್ಸಾಪ್ ಗ್ರೂಪ್‌ನಲ್ಲಿ ಆದೇಶ ಹೊರಡಿಸಿದೆ.

ಪೋಷಕರು ಮತ್ತು ವಿದ್ಯಾರ್ಥಿಗಳ ಹಕ್ಕುಗಳ ರಾಷ್ಟ್ರೀಯ ಸಂಘದ ರಾಷ್ಟ್ರೀಯ ಅಧ್ಯಕ್ಷ ಆರಿಫ್ ಖಾನ್ ಅವರು ಡೆಹ್ರಾಡೂನ್ ಮುಖ್ಯ ಶಿಕ್ಷಣಾಧಿಕಾರಿಗೆ ಪತ್ರ ಬರೆದು, ಶಾಲೆಯ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.ಶಿಕ್ಷಣ ಇಲಾಖೆಯು ಶಾಲೆಗೆ ನೋಟಿಸ್ ಜಾರಿ ಮಾಡಿದ್ದು, ಮೂರು ದಿನಗಳಲ್ಲಿ ಉತ್ತರ ನೀಡುವಂತೆ ಸೂಚಿಸಿದೆ.

ಆರಿಫ್ ಖಾನ್ ಮಾತನಾಡಿ, ‘ಭಾನುವಾರ ಮನ್ ಕಿ ಬಾತ್ ಕಾರ್ಯಕ್ರಮ ಕೇಳಲು ಶಾಲೆಗೆ ಬಾರದ ಮಕ್ಕಳು 100 ರೂಪಾಯಿ ದಂಡ ಅಥವಾ ವೈದ್ಯಕೀಯ ಪ್ರಮಾಣಪತ್ರವನ್ನು ಸಲ್ಲಿಸಲು ಡೆಹ್ರಾಡೂನ್‌ನ ಜಿಆರ್‌ಡಿ ನಿರಂಜನಪುರ ಅಕಾಡೆಮಿ ಆದೇಶ ಹೊರಡಿಸಿದೆ. ಪೋಷಕರು ಸಹ ಈ ಆದೇಶದ ಸ್ಕ್ರೀನ್‌ಶಾಟ್ ಅನ್ನು ತೋರಿಸಿದ್ದಾರೆ’ ಎಂದರು.

ಮುಖ್ಯ ಶಿಕ್ಷ ಣಾಧಿಕಾರಿ ಪ್ರದೀಪ್‌ಕುಮಾರ್‌ ಮಾತನಾಡಿ, ‘ಶಾಲೆಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿದ್ದು, ಮೂರು ದಿನದೊಳಗೆ ಶಾಲೆ ತನ್ನ ನಿಲುವು ಮಂಡಿಸದಿದ್ದರೆ, ಶಾಲೆಯ ಪರವಾಗಿ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಿರುವುದು ಗೊತ್ತಾಗುತ್ತದೆ. ಇದಾದ ನಂತರ ಇಲಾಖೆ ಕ್ರಮ ಕೈಗೊಳ್ಳಲಿದೆ’ ಎಂದರು.

ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ಏಪ್ರಿಲ್ 30 ರಂದು 100 ಸಂಚಿಕೆಗಳನ್ನು ಪೂರೈಸಿದೆ. 100ನೇ ಸಂಚಿಕೆ ಅಂಗವಾಗಿ ದೇಶದಾದ್ಯಂತ ಶಾಲೆಗಳು ಸೇರಿದಂತೆ ಹಲವು ಕಡೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

Leave a Reply

Your email address will not be published. Required fields are marked *