ನವದೆಹಲಿ: ಕೇಂದ್ರದಲ್ಲಿ ಸರ್ಕಾರ ರಚಿಸುವ ಸಿದ್ಧತೆಯ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ (ಜೂನ್ 05) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಿರುವುದಾಗಿ ವರದಿ ತಿಳಿಸಿದೆ.
ರಾಷ್ಟ್ರಪತಿ ಭವನದಲ್ಲಿ ಮುರ್ಮು ಅವರನ್ನು ಭೇಟಿಯಾಗಿ ಮೋದಿ ಅವರು ರಾಜೀನಾಮೆ ಸಲ್ಲಿಸಿದ್ದು, ಈ ಸಂದರ್ಭದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರುಗಳು ರಾಜೀನಾಮೆ ನೀಡಿದ್ದು, ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವವರೆಗೆ ತನಗೆ ತನ್ನ ಕಾರ್ಯ ನಿರ್ವಹಿಸಲು ಅವಕಾಶ ನೀಡಬೇಕೆಂದು ಈ ವೇಳೆ ಮನವಿ ಮಾಡಿಕೊಂಡಿರುವುದಾಗಿ ವರದಿ ವಿವರಿಸಿದೆ.
ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷ 2014ರಲ್ಲಿ 282 ಸ್ಥಾನಗಳಲ್ಲಿ ಜಯ ಗಳಿಸಿತ್ತು. 2019ರಲ್ಲಿ 303 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. 2024ರಲ್ಲಿ 240 ಸ್ಥಾನಗಳಲ್ಲಿ ಗೆದ್ದಿದ್ದು, ಬಹುಮತಕ್ಕೆ 32 ಸ್ಥಾನಗಳ ಕೊರತೆ ಎದುರಾದಂತಾಗಿದೆ. ಆದರೆ ಎನ್ ಡಿಎ ಮೈತ್ರಿಕೂಟ 292 ಸ್ಥಾನ ಹೊಂದಿದ್ದು, ಮೂರನೇ ಅವಧಿಗೆ ಅಧಿಕಾರದ ಗದ್ದುಗೆ ಏರಲು ಸಮಸ್ಯೆ ಇಲ್ಲದಂತಾಗಿದೆ.( ಟಿಡಿಪಿ, ಜೆಡಿಯು ಬೆಂಬಲ ಅಗತ್ಯವಾಗಿದೆ).
ಉತ್ತರಪ್ರದೇಶದ ವಾರಾಣಸಿಯಲ್ಲಿ ಸ್ಪರ್ಧಿಸಿದ್ದ ನರೇಂದ್ರ ಮೋದಿ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಅಜಯ್ ರಾಯ್ ಅವರನ್ನು 1.5 ಲಕ್ಷ ಮತಗಳ ಅಂತರದಿಂದ ಪರಾಜಯಗೊಳಿಸಿದ್ದು, ಈ ಕ್ಷೇತ್ರದಲ್ಲಿ ಸತತ 3 ಬಾರಿ ಗೆಲುವು ಸಾಧಿಸಿದಂತಾಗಿದೆ. ವರದಿಗಳ ಪ್ರಕಾರ, ಜೂನ್ 8ರಂದು ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದ್ದಿರುವುದಾಗಿ ತಿಳಿಸಿದೆ.