Breaking
Mon. Jun 17th, 2024

93ರ ವಯಸ್ಸಿನಲ್ಲಿ 5ನೇ ಮದುವೆಯಾದ ಖ್ಯಾತ ಉದ್ಯಮಿ

By Mooka Nayaka News Jun 3, 2024
Spread the love

ನವದೆಹಲಿ: ಖ್ಯಾತ ಉದ್ಯಮಿ ಹಾಗೂ ಹೂಡಿಕೆದಾರರೊಬ್ಬರು ತನ್ನ 93ನೇ ವಯಸ್ಸಿನಲ್ಲಿ 5ನೇ ಮದುವೆಯಾಗುವ ಮೂಲಕ ಸುದ್ದಿಯಾಗಿದ್ದಾರೆ.

ಆಸ್ಟ್ರೇಲಿಯನ್-ಅಮೆರಿಕನ್ ಉದ್ಯಮಿ, ಹೂಡಿಕೆದಾರ ಮತ್ತು ಮಾಧ್ಯಮ ದಿಗ್ಗಜರಾಗಿ ಖ್ಯಾತಿ ಆಗಿರುವ ಸಿರಿವಂತ ರೂಪರ್ಟ್ ಮುರ್ಡೋಕ್ ತನ್ನ 93ನೇ ವಯಸ್ಸಿನಲ್ಲಿ 5ನೇ ವಿವಾಹವಾಗಿದ್ದಾರೆ.

ಮಾಧ್ಯಮ ಉದ್ಯಮಿ ರೂಪರ್ಟ್ ಮುರ್ಡೋಕ್ ಅವರು ಕ್ಯಾಲಿಫೋರ್ನಿಯಾದ ತಮ್ಮ ಫಾರ್ಮ್‌ಹೌಸ್‌ನಲ್ಲಿ ತಮ್ಮ 67 ವರ್ಷದ ಗೆಳತಿಯನ್ನು ಇತ್ತೀಚೆಗೆ ವಿವಾಹವಾಗಿದ್ದಾರೆ.

ಮುರ್ಡೋಕ್ ನಿವೃತ್ತ ಜೀವಶಾಸ್ತ್ರಜ್ಞೆ ಆಗಿರುವ ಎಲೆನಾ ಝುಕೋವಾ ಅವರೊಂದಿಗೆ 5ನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ಸುದ್ದಿ ಸಂಸ್ಥೆ AFP ವರದಿ ಮಾಡಿದೆ.

ಮುರ್ಡೋಕ್ ಕಳೆದ ಏಪ್ರಿಲ್‌ (2023) ರಲ್ಲಿ ಮಾಜಿ ಪೊಲೀಸ್ ಅಧಿಕಾರಿ ಆನ್ ಲೆಸ್ಲಿ ಸ್ಮಿತ್ ಅವರೊಂದಿಗಿನ ನಿಶ್ಚಿತಾರ್ಥವನ್ನು ರದ್ದುಗೊಳಿಸಿದ ಬಳಿಕ ಎಲೆನಾ ಝುಕೋವಾ ಅವರೊಂದಿಗೆ ಡೇಟ್‌ ಮಾಡಲು ಶುರು ಮಾಡಿದ್ದರು ಎಂದು ವರದಿ ತಿಳಿಸಿದೆ.

ಝುಕೋವಾ ಅವರು ರಷ್ಯಾದಿಂದ ಯುನೈಟೆಡ್ ಸ್ಟೇಟ್ಸ್ ಗೆ ವಲಸೆ ಬಂದವರಾಗಿದ್ದಾರೆ.

ಆರು ಮಕ್ಕಳನ್ನು ಹೊಂದಿರುವ ಮುರ್ಡೋಕ್ ಅವರು ಆಸ್ಟ್ರೇಲಿಯಾದ ಫ್ಲೈಟ್ ಅಟೆಂಡೆಂಟ್ ಪೆಟ್ರೀಷಿಯಾ ಬುಕರ್ ಅವರನ್ನು ಮೊದಲು ವಿವಾಹವಾಗಿದ್ದರು. 1960 ರ ದಶಕದ ಅಂತ್ಯದಲ್ಲಿ ಅವರಿಂದ ವಿಚ್ಛೇದನ ಪಡೆದರು.

ಅವರ ಎರಡನೇ ಪತ್ನಿ, ಅನ್ನಾ ಟೋರ್ವ್, ವೃತ್ತಪತ್ರಿಕೆ ವರದಿಗಾರ್ತಿ ಆಗಿದ್ದರು. ಇವರೊಂದಿಗೆ 30 ವರ್ಷಕ್ಕೂ ಹೆಚ್ಚಿನ ಕಾಲ ದಾಂಪತ್ಯದಲ್ಲಿದ್ದು, 1999 ರಲ್ಲಿ ವಿಚ್ಛೇದನ ಪಡೆದಿದ್ದರು. ಆ ಬಳಿಕ ವೆಂಡಿ ಡೆಂಗ್ ಅವರೊಂದಿಗೆ ಮೂರನೇ ಮದುವೆ ಆಗಿ, 2013 ರಲ್ಲಿ ಅವರಿಂದಲೂ ವಿಚ್ಚೇದನ ಪಡೆದಿದ್ದರು.

ಅವರ ನಾಲ್ಕನೇ ಮದುವೆಯು ಮಾಡೆಲ್ ಜೆರ್ರಿ ಹಾಲ್ ಅವರೊಂದಿಗೆ ಆಗಿತ್ತು. ಇದೀಗ ತಮ್ಮ 93ನೇ ವಯಸ್ಸಿನಲ್ಲಿ 5ನೇ ಮದುವೆ ಆಗಿದ್ದಾರೆ.

ʼದಿ ವಾಲ್ ಸ್ಟ್ರೀಟ್ ಜರ್ನಲ್ʼ, ʼಫಾಕ್ಸ್ ನ್ಯೂಸ್ʼ ಮತ್ತು ಇತರ ಪ್ರಭಾವಶಾಲಿ ಔಟ್‌ಲೆಟ್‌ಗಳನ್ನು ಒಳಗೊಂಡಿರುವ ಆಸ್ಟ್ರೇಲಿಯನ್ ಮೂಲದ ಮುರ್ಡೋಕ್ ಅವರ ಮಾಧ್ಯಮ ಸಾಮ್ರಾಜ್ಯವು ರೂ. 20 ಶತಕೋಟಿಗಿಂತ ಹೆಚ್ಚು ಮೌಲ್ಯದ್ದಾಗಿದೆ ಎಂದು ಫೋರ್ಬ್ಸ್ ವರದಿ ತಿಳಿಸಿದೆ.

ಮುರ್ಡೋಕ್ ತನ್ನ ಜಾಗತಿಕ ಮಾಧ್ಯಮ ಸಾಮ್ರಾಜ್ಯದ ನಿಯಂತ್ರಣವನ್ನು ಕಳೆದ ನವೆಂಬರ್‌ನಲ್ಲಿ ತನ್ನ ಮಗ ಲಾಚ್‌ಲಾನ್‌ಗೆ ಹಸ್ತಾಂತರಿಸಿದ್ದಾರೆ.

Related Post