Breaking
Mon. Oct 14th, 2024

ತಿಹಾರ್‌ ಜೈಲಿಗೆ ಮರಳಿದ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌; ಜೂ. 5ರಂದು ಮತ್ತೆ ಜಾಮೀನು ಅರ್ಜಿ ವಿಚಾರಣೆ

By Mooka Nayaka News Jun 2, 2024
Spread the love

ನವದೆಹಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ನೂರಾರು ಕೋಟಿ ರೂ. ಹಗರಣದ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಮಧ್ಯಂತರ ಜಾಮೀನು ಅವಧಿ ಪೂರ್ಣಗೊಂಡಿದ್ದು, ಇಂದು ಅವರು ತಿಹಾರ್‌ ಜೈಲಿಗೆ ಮರಳಿದ್ದಾರೆ.

ಲೋಕಸಭಾ ಚುನಾವಣೆ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕೋರ್ಟ್‌ ಈ ಹಿಂದೆ ಮೇ 10ರಂದು ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಚುನಾವಣೆ ಪೂರ್ಣಗೊಂಡ ಮರುದಿನವೇ ಜೈಲಿಗೆ ಮರಳುವಂತೆ ಕೋರ್ಟ್‌ ಹೇಳಿತ್ತು. ಅದರಂತೆ ಅವರು 21 ದಿನಗಳ ಬಳಿಕ ಶರಣಾಗಿದ್ದಾರೆ.

ಕೇಜ್ರಿವಾಲ್‌ ಜೈಲಿಗೆ ತೆರಳುವ ಮುನ್ನ ರಾಜ್‌ ಘಾಟ್‌ನಲ್ಲಿರುವ ಮಹಾತ್ಮಾ ಗಾಂಧಿ ಸ್ಮಾರಕಕ್ಕೆ ಭೇಟಿ ನೀಡಿದರು. ಬಳಿಕ ಪತ್ನಿ ಸುನೀತಾ ಅವರೊಂದಿಗೆ ಹನುಮಾನ್‌ ದೇಗುಲಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ನಂತರ ಆಮ್‌ ಆದ್ಮಿ ಪಾರ್ಟಿ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.

ಇನ್ನು ಅರವಿಂದ ಕೇಜ್ರಿವಾಲ್‌ ಅವರ ಜಾಮೀನು ಅರ್ಜಿ ವಿಚಾರಣೆ ಜೂ. 5ರಂದು ದಿಲ್ಲಿ ಕೋರ್ಟ್‌ನಲ್ಲಿ ನಡೆಯಲಿದೆ. ಶನಿವಾರ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದ ಅವರು, ʼʼಈ ಬಾರಿ ಅವರು ನನಗೆ ಹೆಚ್ಚು ಚಿತ್ರಹಿಂಸೆ ನೀಡುವ ಸಾಧ್ಯತೆಯಿದೆ. ಅದಕ್ಕೆ ನಾನು ತಲೆಬಾಗುವುದಿಲ್ಲ” ಎಂದು ಅವರು ಹೇಳಿದ್ದರು. ಜತೆಗೆ ʼʼದೆಹಲಿಯ ಜನರಿಗೆ ಲಭ್ಯವಿರುವ ಎಲ್ಲ ಸೌಲಭ್ಯಗಳು ಅವರ ಅನುಪಸ್ಥಿತಿಯಲ್ಲಿಯೂ ಮುಂದುವರಿಯುತ್ತವೆʼʼ ಎಂದು ಭರವಸೆ ನೀಡಿದ್ದರು.

ʼʼನೀವು ನಿಮ್ಮ ಬಗ್ಗೆ ಕಾಳಜಿ ವಹಿಸಿ, ಜೈಲಿನಲ್ಲಿ ನಿಮ್ಮ ಬಗ್ಗೆ ನಾನು ತುಂಬಾ ಚಿಂತೆ ಮಾಡುತ್ತೇನೆ. ನೀವು ಸಂತೋಷವಾಗಿದ್ದರೆ ನಿಮ್ಮ ಕೇಜ್ರಿವಾಲ್ ಕೂಡ ಸಂತೋಷವಾಗಿರುತ್ತಾರೆ. ನಾನು ಖಂಡಿತವಾಗಿಯೂ ನಿಮ್ಮ ನಡುವೆ ಇರುವುದಿಲ್ಲ, ಆದರೆ ನಿಮ್ಮ ಎಲ್ಲ ಕೆಲಸಗಳು ಮುಂದುವರಿಯುತ್ತವೆ. ಹಿಂದಿರುಗಿದ ನಂತರ ನಾನು ಪ್ರತಿ ತಾಯಿ ಮತ್ತು ಸಹೋದರಿಗೆ ಪ್ರತಿ ತಿಂಗಳು 1,000 ರೂ.ಗಳನ್ನು ನೀಡಲು ಪ್ರಾರಂಭಿಸುತ್ತೇನೆ” ಎಂದು ಕೇಜ್ರಿವಾಲ್‌ ಭಾವುಕರಾಗಿ ಹೇಳಿದ್ದರು.

 

Related Post