ಚೆನ್ನೈ : ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಜೋಸೆಫ್ ವಿಜಯ್ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ರಾಜ್ಯಾದ್ಯಂತ ಧಾರ್ಮಿಕ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳ ಬಳಿ ಕಾರ್ಯನಿರ್ವಹಿಸುತ್ತಿರುವ 717 ಮದ್ಯದಂಗಡಿಗಳನ್ನು ಮುಚ್ಚಲು ಆದೇಶ ಹೊರಡಿಸಿದ್ದಾರೆ.
ದೇವಾಲಯಗಳು, ಮಸೀದಿಗಳು, ಚರ್ಚ್ಗಳು, ಶಾಲೆಗಳು, ಕಾಲೇಜುಗಳು ಮತ್ತು ಬಸ್ ನಿಲ್ದಾಣಗಳ 500 ಮೀಟರ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮದ ಎಲ್ಲ ಮದ್ಯದಂಗಡಿಗಳನ್ನು ಮುಂದಿನ ಎರಡು ವಾರಗಳಲ್ಲಿ ಮುಚ್ಚುವಂತೆ ಸೂಚಿಸಲಾಗಿದೆ.
ತಮಿಳುನಾಡು ಸರ್ಕಾರದ ಪ್ರಕಾರ, ರಾಜ್ಯದಲ್ಲಿ ಪ್ರಸ್ತುತ ಒಟ್ಟು 4,765 ಟಾಸ್ಮ್ಯಾಕ್ ಮದ್ಯದಂಗಡಿಗಳಿವೆ. ಮುಚ್ಚಲು ಗುರುತಿಸಲಾದ 717 ಅಂಗಡಿಗಳಲ್ಲಿ 276 ಪೂಜಾ ಸ್ಥಳಗಳ ಬಳಿ, 186 ಶಿಕ್ಷಣ ಸಂಸ್ಥೆಗಳ ಬಳಿ ಮತ್ತು 255 ಬಸ್ ನಿಲ್ದಾಣಗಳ ಬಳಿ ಇವೆ. ತಮಿಳುನಾಡು ಸರ್ಕಾರವು ರಾಜ್ಯದಲ್ಲಿ ಒಟ್ಟು 4,765 ಟಾಸ್ಮ್ಯಾಕ್ ಮದ್ಯದಂಗಡಿಗಳಿವೆ ಎಂದು ತಿಳಿಸಿದೆ.
ಈ ಕ್ರಮವು ವಿಜಯ್ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಕೈಗೊಂಡ ಮೊದಲ ಪ್ರಮುಖ ನಿರ್ಧಾರ ಎನಿಸಿಕೊಂಡಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಮದ್ಯದಂಗಡಿಗಳ ಬಗ್ಗೆ ಇರುವ ಕಳವಳಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದನ್ನು ನೂತನ ಸರ್ಕಾರದ ಪ್ರಮುಖ ಸಾಮಾಜಿಕ ಸುಧಾರಣಾ ಕ್ರಮ ಎಂದು ಬಿಂಬಿಸಲಾಗುತ್ತಿದೆ.
ಟಾಸ್ಮ್ಯಾಕ್ ರಾಜ್ಯದ ಅತಿ ಹೆಚ್ಚು ಆದಾಯ ತರುವ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಒಂದಾಗಿ ಉಳಿದಿದೆ. ಆದ್ದರಿಂದ ಅದರ ಮಳಿಗೆಗಳನ್ನು ಮುಚ್ಚುವ ನಿರ್ಧಾರವು ತಮಿಳುನಾಡು ಸರ್ಕಾರದ ಹಣಕಾಸಿನ ಸ್ಥಿತಿಗತಿ ಮತ್ತು ಕಲ್ಯಾಣ ಯೋಜನೆಗಳ ಭರವಸೆಗಳನ್ನು ಈಡೇರಿಸುವ ಅದರ ಸಾಮರ್ಥ್ಯದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಚರ್ಚೆಗಳನ್ನು ಹುಟ್ಟುಹಾಕುವ ಸಾಧ್ಯತೆಯಿದೆ.
