ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕನ್ಯಾಕುಮಾರಿಯ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಎರಡು ದಿನಗಳ ಕಾಲ ಧ್ಯಾನ ಮಾಡುತ್ತಿರುವುದಕ್ಕೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ರಾಜಕೀಯ ಮತ್ತು ಧರ್ಮವನ್ನು ಎಂದಿಗೂ ಒಟ್ಟಿಗೆ ಸೇರಿಸಬಾರದು ಮತ್ತು ನಿಮಗೆ ದೇವರಲ್ಲಿ ನಂಬಿಕೆ ಇದ್ದರೆ ಅದನ್ನು ನಿಮ್ಮ ಮನೆಯಲ್ಲಿ ಮಾಡಿ ಎಂದು ಶುಕ್ರವಾರ ಹೇಳಿದ್ದಾರೆ.
“ರಾಜಕೀಯ ಮತ್ತು ಧರ್ಮವನ್ನು ಎಂದಿಗೂ ಒಟ್ಟಿಗೆ ಸೇರಿಸಬಾರದು. ಇವೆರಡನ್ನೂ ಪ್ರತ್ಯೇಕವಾಗಿ ಇಡಬೇಕು. ಒಂದು ಧರ್ಮದ ವ್ಯಕ್ತಿ ನಿಮ್ಮೊಂದಿಗೆ ಇರಬಹುದು ಮತ್ತು ಇನ್ನೊಂದು ಧರ್ಮದ ವ್ಯಕ್ತಿ ನಿಮ್ಮ ವಿರುದ್ಧ ಇರಬಹುದು. ಚುನಾವಣೆಯೊಂದಿಗೆ ಧಾರ್ಮಿಕ ಭಾವನೆಗಳನ್ನು ಲಿಂಕ್ ಮಾಡುವುದು ತಪ್ಪು. ಕನ್ಯಾಕುಮಾರಿಗೆ ಹೋಗಿ ನಾಟಕ ಪ್ರದರ್ಶಿಸಿ ಅದೆಷ್ಟು ಪೋಲೀಸ್ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತೀರಿ? ಪೊಲೀಸ್ ಅಧಿಕಾರಿಗಳನ್ನು ನೇಮಿಸಿಕೊಂಡು ಇಷ್ಟೊಂದು ಹಣ ಏಕೆ ಪೋಲು ಮಾಡುತ್ತೀರಿ? ಅಲ್ಲಿಗೆ ಹೋಗಿ ನೀವು ಮಾಡುತ್ತಿರುವ ಶೋ-ಆಫ್ ನಿಂದ ದೇಶಕ್ಕೆ ಹಾನಿ ಉಂಟು ಮಾಡಲಿದೆ. ನಿಮಗೆ ದೇವರಲ್ಲಿ ನಂಬಿಕೆ ಇದ್ದರೆ ನಿಮ್ಮ ಮನೆಯಲ್ಲಿ ಮಾಡಿ ಎಂದು ಖರ್ಗೆ ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿ ಅವರು ಕನ್ನಿಕುಮಾರಿಯ ಧ್ಯಾನ ಮಂಟಪದಲ್ಲಿ ಇಂದಿನಿಂದ ಧ್ಯಾನ ಆರಂಭಿಸಿದ್ದು, ಜೂನ್ 1ರವರೆಗೆ ಅವರು ತಮ್ಮ ಧ್ಯಾನವನ್ನು ಮುಂದುವರಿಸಲಿದ್ದಾರೆ.
“ಅವರು (ಪಿಎಂ ಮೋದಿ) ಏನೇ ಹೇಳಲಿ, ದೇಶದ ಜನ ಪ್ರಧಾನಿ ಮೋದಿಯವರ ನಾಯಕತ್ವವನ್ನು ತಿರಸ್ಕರಿಸಲು ನಿರ್ಧರಿಸಿದ್ದಾರೆ. ಹಣದುಬ್ಬರ ಮತ್ತು ನಿರುದ್ಯೋಗ ಈ ಚುನಾವಣೆಯಲ್ಲಿ ಕೆಲಸ ಮಾಡಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿಷಯವು ಜನರ ಮನಸ್ಸಿನಲ್ಲಿ ಇದೆ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ.