ತೀರ್ಥಹಳ್ಳಿ : ಈಶ್ವರಪ್ಪನವರಿಂದ ನಾನು ಏನನ್ನೂ ಕಲಿಯ ಬೇಕಾಗಿಲ್ಲ ನಮ್ಮ ಸಂಸ್ಕೃತಿ ಮತ್ತು ಪರಂಪರೆ ಬಗ್ಗೆ ನನಗೆ ಗೊತ್ತಿದೆ. ನನ್ನ ಅಮ್ಮ ದೇವರ ಮನೆಯಲ್ಲಿ ಪೂಜೆ ಹೇಳಿಕೊಟ್ಟಿದ್ದಾರೆ. ನನ್ನ ಅತ್ತೆ ಬಾಗಿಲು ಪೂಜೆ, ತುಳಸಿ ಪೂಜೆ ಮಾಡುವುದನ್ನು ಹೇಳಿಕೊಟ್ಟಿದ್ದಾರೆ. ದಿನ ನಿತ್ಯ ನಮ್ಮ ಮನೆಯಲ್ಲಿ ನಡೆಯುತ್ತಲೇ ಇರುತ್ತದೆ ಎಂದು ಹಣೆಯ ಕುಂಕುಮ ಅಳಿಸಿಕೊಂಡ ವಿಚಾರಕ್ಕೆ ಗೀತಾ ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ತೀರ್ಥಹಳ್ಳಿಯಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಕುಂಕುಮ ಅಳಿಸಿಕೊಂಡಿದ್ದಕ್ಕೆ ಗೀತಾ ಶಿವರಾಜ್ ಕುಮಾರ್ ಕ್ಷಮೆ ಕೇಳಬೇಕು ಎಂದು ಈಶ್ವರಪ್ಪ ಹೇಳಿದ್ದಾರೆ. ಅವರಿಂದ ನಾನು ಏನನ್ನೂ ಕಲಿಯಬೇಕಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ಮಂಗಳಸೂತ್ರ ಹೇಳಿಕೆ ವಿಚಾರವಾಗಿ ಮಾತನಾಡಿ ಇದು ಅತಿ ಸೂಕ್ಷ್ಮ ವಿಚಾರ. ಈ ರೀತಿ ಮಾತನಾಡುವುದು ಪ್ರಧಾನಿಗಳಿಗೆ ಸೂಕ್ತ ಅಲ್ಲ.ಅದನ್ನು ನಾನೂ ಖಂಡಿಸುತ್ತೇನೆ, ಅವರ ಬಾಯಿಂದ ಈ ರೀತಿ ಹೇಳಿಕೆ ಬರಬಾರದು ಎಂದರು.
ಶಿವರಾಜ್ ಕುಮಾರ್ ಮಾತನಾಡಿ, ಜನರಿಗೆ ಸೇವೆ ಮಾಡಲು ಅನುಭವ ಬೇಡ. ಮಾತನಾಡುವವರು ಇಲ್ಲಿಯವರೆಗೆ ಏನು ಕೆಲಸ ಮಾಡಿದ್ದಾರೆ.ಯಾರೋ ಹೇಳಿದ್ದನ್ನು ನಂಬುವ ಬದಲು ನಮ್ಮ ಮನಸ್ಸು ಹೇಳಿದ್ದನ್ನು ಕೇಳೋಣ. ಸರ್ಕಾರ ಈಗಾಗಲೇ ಸುಮಾರು ಗ್ಯಾರಂಟಿ ಕೊಟ್ಟಿದೆ. ನಾನು ಆ ಗ್ಯಾರೆಂಟಿ ಬಗ್ಗೆ ಮಾತನಾಡಲ್ಲ ಆದರೆ ನನ್ನ ಪತ್ನಿ ಬಗ್ಗೆ ನಾನೇ ಗ್ಯಾರಂಟಿ ಎಂದರು.
ಕಿಮ್ಮನೆ ರತ್ನಾಕರ್ ಮಾತನಾಡಿ, ದೇಶದ ರಕ್ಷಣೆ ಮಾಡಲು ಆರ್ಮಿ ಇದ್ದಾರೆ. ಮೋದಿ ಬೇಡ. ಇವರು ಲಡಾಕ್, ಹಿಮಾಚಲಪ್ರದೇಶಕ್ಕೆ ಹೋಗಬೇಕಾಗಿಲ್ಲ.ಇವರು ದೇಶವನ್ನು ಏನು ಉದ್ದಾರ ಮಾಡಿದ್ದಾರೆ? ದೇಶದ ಅಸ್ತಿಯನ್ನು ಸಂರಕ್ಷಣೆ ಮಾಡುವಂತಹದ್ದು ಆದರೆ ಇವರು ಬಂದ ಮೇಲೆ ವಿಮಾನ ನಿಲ್ದಾಣ, ಬಂದರು ಸೇಲ್ ಮಾಡಿದ್ದಾರೆ, ಬಿಎಸ್ಎನ್ಎಲ್ ಹರಾಜಿಗೆ ಇಟ್ಟಿದ್ದಾರೆ.ಅಷ್ಟೇ ಅಲ್ಲದೆ 186 ಕೋಟಿ ಸಾಲ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಆರ್.ಎಂ. ಮಂಜುನಾಥ್ ಗೌಡ ಮಾತನಾಡಿ, ಬಾರಿ ಬದಲಾವಣೆಯ ಚುನಾವಣೆ ಆಗಬೇಕು, ನಾವೆಲ್ಲರೂ ದೈರ್ಯದಿಂದ ಚುನಾವಣೆ ಮತ ಕೇಳಲು ಬಂದಿದ್ದೇವೆ. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಗ್ಯಾರೆಂಟಿ ನೀಡಿದ್ದೆವು ಜನ ಆಶೀರ್ವಾದ ಮಾಡಿದರು. ಐದು ಗ್ಯಾರೆಂಟಿ ಯೋಜನೆಯನ್ನು ಜಾರಿಗೆ ತಂದಿದೆ. ಕೇಂದ್ರದಲ್ಲಿ ಸರ್ಕಾರ ಬಂದರೆ 25 ಗ್ಯಾರಂಟಿಯನ್ನು ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ತಯಾರಿ ಮಾಡಲಾಗಿದೆ. ಆರಗ ಹೇಳಿದ ಹಾಗೆ ಇದು 420 ಯೋಜನೆ ಅಲ್ಲ. ಶ್ರಮಿಕರ ಪರವಾಗಿ ಕಾಂಗ್ರೆಸ್ ಪಕ್ಷ ಇದೆ. ಬಿಜೆಪಿ ಜನರಿಗೆ ಏನು ಕೊಟ್ಟಿಲ್ಲ. ನಾವು ಜನರ ಹಣವನ್ನು ಜನರಿಗೆ ತಲುಪಿಸುವ ಕೆಲಸ ಮಾಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸುಂದರೇಶ್, ಕೆಸ್ತೂರು ಮಂಜುನಾಥ್, ವಿಶ್ವನಾಥ್ ಶೆಟ್ಟಿ, ಅಮರನಾಥ್ ಶೆಟ್ಟಿ, ಸುಶೀಲ ಶೆಟ್ಟಿ, ಮಂಜುಳಾ ನಾಗೇಂದ್ರ, ಯು ಡಿ ವೆಂಕಟೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.