Breaking
Tue. Oct 8th, 2024

ಈಶ್ವರಪ್ಪ ನಾಮಪತ್ರ ಹಿಂದಕ್ಕೆ ಪಡೆಯಲು ಇನ್ನೂ ಅವಕಾಶವಿದೆ, ಕಾದು ನೋಡಿ: ಬಿ.ವೈ.ವಿಜಯೇಂದ್ರ

By Mooka Nayaka News Apr 12, 2024
Spread the love

ಬಳ್ಳಾರಿ: ಈಗಲೇ ಅಂತಿಮ ತೀರ್ಮಾನ ಮಾಡಬೇಡಿ, ಇನ್ನೂ ಸಮಯವಿದೆ. ಈಶ್ವರಪ್ಪ ನಾಮಪತ್ರ ಹಿಂದಕ್ಕೆ ಪಡೆಯಲು ಇನ್ನೂ ಅವಕಾಶ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಶುಕ್ರವಾರ ಹೇಳಿದ್ದಾರೆ.

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಶ್ರೀರಾಮುಲು ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿರುವ ಬಿ.ವೈ. ವಿಜಯೇಂದ್ರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಯಡಿಯೂರಪ್ಪ ಆದೇಶದಂತೆ ಬಳ್ಳಾರಿಗೆ ಬಂದಿದ್ದೇನೆ. ಕಾಂಗ್ರೆಸ್ ಏನೇ ಹಾರಾಟ ಮಾಡಿದರೂ ಬಿಜೆಪಿಯ ಗೆಲುವು ಖಚಿತ. ಶ್ರೀರಾಮುಲು ದಾಖಲೆಯ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ. ಬಳ್ಳಾರಿಗೆ ಯಡಿಯೂರಪ್ಪ ಸೇರಿದಂತೆ ಇತರ ನಾಯಕರು ಪ್ರಚಾರಕ್ಕೆ ಆಗಮಿಸಲಿದ್ದಾರೆ. ರಾಜ್ಯದ 30 ಜನ ಸಚಿವರನ್ನು ಕರೆ ತಂದರೂ ಬಳ್ಳಾರಿಯಲ್ಲಿ ಬಿಜೆಪಿ ಗೆಲುವು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಮುಖ ಲಿಂಗಾಯತ ಮುಖಂಡರ ಸಭೆ ವಿಚಾರವಾಗಿ ಮಾತನಾಡಿ, ನಾನೀಗ ಯಾವುದೇ ಲಿಂಗಾಯತ ಮುಖಂಡರ ಸಭೆ ಮಾಡಿಲ್ಲ. ಕೆಲಕಾಲ ಮಾತನಾಡಿದ್ದೇನಷ್ಟೇ. ಮುಂದಿನ ದಿನಗಳಲ್ಲಿ ಸಭೆ ಕರೆಯಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆ ಆಗಲು ಕಾರಣಗಳು ಬಹಳಷ್ಟಿವೆ. ಅದರ ಬಗ್ಗೆ ಈಗ ಚರ್ಚೆ ಮಾಡಲು ಹೋಗುವುದಿಲ್ಲ. ಎಲ್ಲವನ್ನೂ ಮರೆತು, ನರೇಂದ್ರ ಮೋದಿಯವರು ಮತ್ತೆ ಪ್ರಧಾನಿ ಆಗುವ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷದವರು ಒಂದಾಗಿ ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದರು.

ಈ ಚುನಾವಣೆಯು ವಿಜಯೇಂದ್ರ vs ಸಿದ್ದರಾಮಯ್ಯ ಎಂಬ ಮಾಧ್ಯಮದವರ ಪ್ರಶ್ನೆ ಪ್ರತಿಕ್ರಿಯಿಸಿ, ಹಾಗೇನಿಲ್ಲ, ಹೊಸ ಚರ್ಚೆಗೆ ಅವಕಾಶ ಮಾಡಿಕೊಡುವುದು ಬೇಡ. ಎಲ್ಲ 28 ಕ್ಷೇತ್ರಗಳಲ್ಲಿಯೂ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳು ಗೆಲ್ಲಬೇಕು ಎಂಬುದೇ ನಮ್ಮ ಗುರಿಯಾಗಿದೆ. ಆ ಒಂದು ಆತ್ಮವಿಶ್ವಾಸದೊಂದಿಗೆ ನಾವೀಗ ಮುನ್ನುಗ್ಗುತ್ತಿದ್ದೇವೆ ಎಂದು ತಿಳಿಸಿದರು.

 

Related Post