ಹುಬ್ಬಳ್ಳಿ: ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿಗಳು ದೊಡ್ಡವರು, ನಮ್ಮಿಂದ ಅಥವಾ ಪ್ರಹ್ಲಾದ್ ಜೋಶಿ ಅವರಿಂದ ಏನೇ ತಪ್ಪಾಗಿದ್ದರೂ ಕ್ಷಮಿಸಬೇಕು. ಆಗಿರುವ ತಪ್ಪನ್ನು ಸರಿ ಮಾಡಿಕೊಳ್ಳುತ್ತೇವೆ. ಕೇಂದ್ರ ಹಾಗೂ ರಾಜ್ಯ ನಾಯಕರು ಶ್ರೀಗಳೊಂದಿಗೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿಂಗಾಲೇಶ್ವರ ಶ್ರೀಗಳ ವಿಚಾರದಲ್ಲಿ ಅವರ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಕೇಂದ್ರದ ನಾಯಕರು ಶ್ರೀಗಳೊಂದಿಗೆ ಮಾತನಾಡುತ್ತಿದ್ದಾರೆ. ತಪ್ಪನ್ನು ಸರಿ ಮಾಡಿಕೊಳ್ಳುತ್ತೇವೆ ಶ್ರೀಗಳು ಅದನ್ನು ಕ್ಷಮಿಸಬೇಕು ಎಂದು ವೈಯಕ್ತಿಕವಾಗಿ ಮನವಿ ಮಾಡುತ್ತೇನೆ ಎಂದರು.
ಹರಿಹರ ಪಂಚಮಸಾಲಿ ಪೀಠದ ಶ್ರೀಗಳು ಹೇಳಿಕೆಯನ್ನು ಗಮನಿಸಿದ್ದೇವೆ. ಏಪ್ರಿಲ್ 14ರಂದು ಹರಿಹರ ಪೀಠಕ್ಕೆ ತೆರಳಲಿದ್ದು, ಶ್ರೀಗಳೊಂದಿಗೆ ಚರ್ಚೆ ಮಾಡಲಿದ್ದೇವೆ. ಬಿಜೆಪಿಯಿಂದ ಪಂಚಮಸಾಲಿ ಸಮಾಜಕ್ಕೆ ಯಾವುದೇ ಅನ್ಯಾಯ ಆಗಿಲ್ಲ. ಈ ಕುರಿತು ಶ್ರೀಗಳಲ್ಲಿರುವ ಗೊಂದಲಗಳ ಬಗ್ಗೆ ಅವರೊಂದಿಗೆ ಚರ್ಚೆ ಮಾಡುತ್ತೇವೆ ಎಂದರು.
ದಿಂಗಾಲೇಶ್ವರ ಶ್ರೀಗಳ ಕುರಿತು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಗುರವಾಗಿ ಮಾತನಾಡಿರುವ ಕುರಿತು ಪ್ರಶ್ನೆಗೆ ಉತ್ತರಿಸಿದ ನಿರಾಣಿ, ಅವರ ಹೇಳಿಕೆಯನ್ನು ನಾನು ಗಮನಿಸಿಲ್ಲ. ಯಾವುದೇ ಸ್ವಾಮೀಜಿಗಳ ಬಗ್ಗೆ ಯಾರೂ ಕೂಡ ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ ಎಂದು ಪ್ರತಿಕ್ರಿಸಿದರು.