ಶಿವಮೊಗ್ಗ : ಬಿಜೆಪಿ ವಿರುದ್ಧ ಬಂಡಾಯ ಎದ್ದು ಯಡಿಯೂರಪ್ಪ ಮತ್ತು ಪುತ್ರ ರ ವಿರುದ್ದ ಸಮರ ಸಾರಿರುವ ಮಾಜಿ ಡಿಸಿಎಂ, ಹಿರಿಯ ಬಿಜೆಪಿ ನಾಯಕ ಕೆ. ಎಸ್. ಈಶ್ವರಪ್ಪ ಮತ್ತು ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ಯುಗಾದಿಯ ದಿನ ಒಂದೇ ಸಮಾರಂಭದಲ್ಲಿ ಕಾಣಿಸಿಕೊಂಡರು.
ಶಿವಮೊಗ್ಗದ ಆರ್ ಎಸ್ ಎಸ್ ಮುಖಂಡರು ಆದಿಚುಂಚನಗಿರಿ ಶಾಲಾ ಮೈದಾನದಲ್ಲಿ ಯುಗಾದಿ ಪ್ರಯುಕ್ತ ನಡೆಸಿದ ಕಾರ್ಯಕ್ರಮದಲ್ಲಿ ರಾಘವೇಂದ್ರ ಮತ್ತು ಈಶ್ವರಪ್ಪ ಇಬ್ಬರೂ ಸಂಘದ ಗಣವೇಷ ಧರಿಸಿ ಭಾಗಿಯಾಗಿ ಗಮನ ಸೆಳೆದರು. ವೇದಿಕೆಯ ಮುಂಭಾಗದಲ್ಲಿ ಗಣ್ಯರಿಗಾಗಿ ಹಾಕಲಾಗಿದ್ದ ಕುರ್ಚಿಗಳಲ್ಲಿ ಇಬ್ಬರು ದೂರ ದೂರ ಆಸೀನರಾಗಿದ್ದರು.
ರಾಘವೇಂದ್ರ ಮುಂಭಾಗದ ಸಾಲಿನಲ್ಲಿ ನಗು ನಗುತ್ತಾ ಕುಳಿತಿದ್ದರೆ, ಈಶ್ವರಪ್ಪ ಅವರು ಹಿಂಭಾಗದ ಸಾಲಿನಲ್ಲಿ ಗಂಭೀರವಾಗಿ ಆಸೀನರಾಗಿದ್ದರು. ಇಬ್ಬರು ಮುಖಕ್ಕೆ ಮುಖ ಕೊಟ್ಟು ಮಾತನಾಡಿಲ್ಲ, ಪರಸ್ಪರ ನಗೆಯನ್ನೂ ಬೀರಲಿಲ್ಲ. ಇಬ್ಬರೂ ಬೇರೆ ನಾಯಕರೊಂದಿಗೆ ಪರಸ್ಪರ ಮಾತನಾಡಿದರು.
ಯಡಿಯೂರಪ್ಪ ಮತ್ತು ಪುತ್ರರ ವಿರುದ್ಧ ಕೆಂಡಾಮಂಡಲವಾಗಿ ಬಂಡಾಯ ಸ್ಪರ್ಧೆ ಘೋಷಿಸಿ ಪ್ರಚಾರಕ್ಕಿಳಿದಿರುವ ಈಶ್ವರಪ್ಪ ಅವರ ಮುನಿಸು ತಣಿಸುವುದು ಸದ್ಯದ ಮಟ್ಟಿಗೆ ಸಂಘಕ್ಕೂ ದೊಡ್ಡ ಸವಾಲಾಗಿ ಪರಿಣಮಿಸಿದೆ.