ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಶೋಭಾ ಕರಂದ್ಲಾಜೆ ಅವರ ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ಸಾವನ್ನಪ್ಪಿದ್ದಾನೆ.
ಕೆಆರ್ ಪುರದ ಬಸ್ ನಿಲ್ದಾಣದಲ್ಲಿರುವ ವಿನಾಯಕ ದೇವಸ್ಥಾನದ ಬಳಿ ಅಪಘಾತ ಸಂಭವಿಸಿದ್ದು ಟಿಸಿ ಪಾಳ್ಯ ನಿವಾಸಿ 60 ವರ್ಷದ ಪ್ರಕಾಶ್ ಮೃತಪಟ್ಟಿದ್ದಾರೆ. ರಸ್ತೆ ಬದಿ ನಿಂತಿದ್ದ ಕಾರಿನ ಡೋರ್ ತೆರೆದಾಗ ಹಿಂಬದಿಯಿಂದ ಬರುತ್ತಿದ್ದ ಪ್ರಕಾಶ್ ಬೈಕ್ ಗೆ ತಾಗಿ ಕೆಳಗೆ ಬಿದ್ದಿದ್ದು ಅವರ ಮೇಲೆ ಖಾಸಗಿ ಬಸ್ ಹರಿದಿದೆ. ಗಂಭೀರ ಗಾಯಗೊಂಡ ಪ್ರಕಾಶ್ ರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಪ್ರಕಾಶ್ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಕೆ.ಆರ್. ಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೆಆರ್ ಪುರ ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಅಪಘಾತ ಸಂಬಂಧ ಕಾರಿನ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶೋಭಾ ಕರಂದ್ಲಾಜೆ ಅವರು, ಮೃತ ಪ್ರಕಾಶ್ ಬಿಜೆಪಿ ಕಾರ್ಯಕರ್ತ. ಚುನಾವಣಾ ಪ್ರಚಾರದ ವೇಳೆ ರಸ್ತೆ ಬದಿ ಕಾರು ನಿಲ್ಲಿಸಲಾಗಿತ್ತು. ಕಾರಿನ ಡೋರ್ ತೆರೆಯುವಾಗ ಬೈಕ್‌ನಲ್ಲಿ ಬಂದು ಗುದ್ದಿದ್ದು ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಹಿಂದಿನಿಂದ ಬಂದ ಖಾಸಗಿ ಬಸ್ ಅವರ ಮೇಲೆ ಹರಿದು ಮೃತಪಟ್ಟಿದ್ದಾರೆ. ಈ ಘಟನೆ ನಿಜಕ್ಕೂ ದುಃಖ ತಂದಿದೆ. ಅವರ ಕುಟುಂಬಸ್ಥರ ಜತೆಗೆ ನಾವಿದ್ದೇವೆ. ಪಾರ್ಟಿ ವತಿಯಿಂದ ಪರಿಹಾರ ಕೊಡುತ್ತೇವೆ ಎಂದರು.