Trending

ಭದ್ರಾವತಿಯಲ್ಲಿ ಹೋಟೆಲ್‌, ಬೇಕರಿಗಳ ಮೇಲೆ ಅಧಿಕಾರಿಗಳ ದಿಢೀರ್ ದಾಳಿ

Spread the love

ಭದ್ರಾವತಿ: ನಗರದ ಹೋಟೆಲ್‌ಗಳು, ಬೇಕರಿಗಳು ಹಾಗೂ ಸಿಹಿ ತಿನಿಸುಗಳ ತಯಾರಿಕಾ ಕೇಂದ್ರಗಳ ಮೇಲೆ ಬುಧವಾರ ಸಂಜೆ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿತು.

ಈ ವೇಳೆ ಆಹಾರ ತಯಾರಿಕೆಯಲ್ಲಿ ರಾಸಾಯನಿಕ ಬಣ್ಣ ಬಳಕೆ, ಅವಧಿ ಮೀರಿದ ಪದಾರ್ಥಗಳ ಉಪಯೋಗ ಹಾಗೂ ಸ್ವಚ್ಛತೆಯ ಕೊರತೆ ಸೇರಿದಂತೆ ಹಲವು ಲೋಪಗಳು ಕಂಡುಬಂದವು.

ಉಪವಿಭಾಗಾಧಿಕಾರಿ ಡಾ. ಹೆಚ್.ಪಿ.ಎಸ್. ಮೈತ್ರಿ ಹಾಗೂ ತಹಶೀಲ್ದಾರ್ ಪ್ರದೀಪ್ ದೇವಗಿರಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ರಾಸಾಯನಿಕ ಬಣ್ಣ ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು.

ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲನೆಗಾಗಿ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲು ಕ್ರಮ ಕೈಗೊಳ್ಳಲಾಯಿತು.

ಸಿಹಿ ತಿನಿಸು, ಬ್ರೆಡ್‌, ಬನ್‌ ಹಾಗೂ ಕೇಕ್ ತಯಾರಿಕಾ ಕೇಂದ್ರಗಳಲ್ಲಿ ಬಳಸುವ ಪದಾರ್ಥಗಳ ಗುಣಮಟ್ಟವನ್ನು ಪರಿಶೀಲಿಸಿದಾಗ ಕೆಲವು ಲೋಪಗಳು ಪತ್ತೆಯಾದವು.

ತಿನಿಸುಗಳ ಪ್ಯಾಕೆಟ್‌ಗಳ ಮೇಲೆ ದರ ಹಾಗೂ ಅವಧಿ ನಮೂದಿಸುವ ಲೇಬಲ್‌ಗಳನ್ನು ಅಳವಡಿಸದಿರುವುದು ಮತ್ತು ಆಹಾರ ತಯಾರಿಕಾ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡದಿರುವುದೂ ಗಮನಕ್ಕೆ ಬಂದಿತು.

ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಂಗಡಿ ಮತ್ತು ಹೋಟೆಲ್ ಮಾಲೀಕರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದರು.

ಪಾನ್ ಶಾಪ್‌ಗಳಲ್ಲಿ ಬೀಡಾ ತಯಾರಿಕೆಗೆ ಬಳಸುವ ಪದಾರ್ಥಗಳ ಸಂಗ್ರಹಣೆ ಹಾಗೂ ಸ್ವಚ್ಛತೆಯನ್ನೂ ಪರಿಶೀಲಿಸಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ ಸೇವಿಸಿ ಪಾದಚಾರಿ ಮಾರ್ಗಗಳಲ್ಲಿ ಉಗುಳುವವರ ವರ್ತನೆಗೆ ಉಪವಿಭಾಗಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರು.

ಮಾಂಸಾಹಾರಿ ಹೋಟೆಲ್‌ಗಳಲ್ಲಿ ಆಹಾರ ತಯಾರಿಕೆಯ ಸ್ವಚ್ಛತೆ ಹಾಗೂ ಅಡುಗೆಗೆ ಬಳಸುವ ಹಂಚುಗಳ ಸ್ಥಿತಿಯನ್ನು ಪರಿಶೀಲಿಸಲಾಯಿತು. ಬಳಕೆಗೆ ಯೋಗ್ಯವಲ್ಲದ ಹಂಚುಗಳನ್ನು ತೆರವುಗೊಳಿಸಿ ಹೊಸ ಹಂಚುಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಲಾಯಿತು.

ಅಲ್ಲದೆ, ಹೋಟೆಲ್‌ಗಳು ಮತ್ತು ಅಂಗಡಿಗಳಲ್ಲಿ ಅಗತ್ಯ ಪರವಾನಗಿಗಳನ್ನು ಗ್ರಾಹಕರಿಗೆ ಕಾಣುವಂತೆ ಪ್ರದರ್ಶಿಸಬೇಕು ಎಂದು ಅಧಿಕಾರಿಗಳು ತಿಳಿಸಿದರು.

ಕಾರ್ಯಾಚರಣೆಯಲ್ಲಿ ಎಫ್‌ಎಸ್‌ಎಸ್‌ಎಐ ಆಹಾರ ನಿರೀಕ್ಷಕರಾದ ಶಶಿಕುಮಾರ್, ಮನೋಜ್ ಬಿ.ಎಂ., ಉಮೇಶ್, ಮನೋಜ್ ಮತ್ತು ಸುಮಾ, ಉಪತಹಶೀಲ್ದಾರ್ ಮಂಜ ನಾಯಕ್, ಕಂದಾಯ ನಿರೀಕ್ಷಕ ಪ್ರಶಾಂತ್, ಗ್ರಾಮ ಲೆಕ್ಕಾಧಿಕಾರಿ ಶಿವಣ್ಣ ಕೂಡ್ಲಿಗೆರೆ ಹಾಗೂ ಆರ್‌ಐ ಅನಿಲ್ ರಾಜ್ ಪಾಲ್ಗೊಂಡಿದ್ದರು.

[pj-news-ticker]