ಭದ್ರಾವತಿ: ಹಳೇನಗರದ ಪುರಾಣ ಪ್ರಸಿದ್ಧ ಹಾಗೂ ಮುಜರಾಯಿ ಇಲಾಖೆಗೆ ಸೇರಿದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಪ್ರವೇಶದ್ವಾರದ ಬಳಿಯಿದ್ದ ಕಾಂಕ್ರೀಟ್ ನಾಮಫಲಕವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ.
ದೇವಾಲಯದ ನಾಮಫಲಕ ಧ್ವಂಸಗೊಳಿಸಿದ ಕೃತ್ಯವೆಸಗಿದವರನ್ನು ತಕ್ಷಣ ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಗರಸಭೆಯ ಮಾಜಿ ಸದಸ್ಯ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಎಂ.ಈ. ಜಗದೀಶ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವ ಹೊಂದಿರುವ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಸಂರಕ್ಷಣೆ ಮತ್ತು ನಿರ್ವಹಣೆಗೆ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆ ಮುಂದಾಗಿದೆ.
ಇಂತಹ ಪವಿತ್ರ ಕ್ಷೇತ್ರದ ಮುಂಭಾಗದಲ್ಲಿದ್ದ ನಾಮಫಲಕವನ್ನು ಧ್ವಂಸಗೊಳಿಸಿರುವುದು ಪ್ರತಿದಿನ ದೇವಾಲಯಕ್ಕೆ ಆಗಮಿಸುವ ನೂರಾರು ಭಕ್ತರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಜಗದೀಶ್ ತಿಳಿಸಿದ್ದಾರೆ.
ಘಟನೆಯ ಕುರಿತು ದೇವಾಲಯದ ಆಡಳಿತ ವ್ಯವಸ್ಥಾಪಕ ಮಂಡಳಿ ಹಾಗೂ ಅರ್ಚಕರ ಕುಟುಂಬದ ಗಮನಕ್ಕೂ ಈಗಾಗಲೇ ತರಲಾಗಿದೆ.
ಸಾರ್ವಜನಿಕರು ಹಾಗೂ ಕ್ಷೇತ್ರದ ನಾಗರಿಕರ ಹಿತದೃಷ್ಟಿಯಿಂದ ಪೊಲೀಸರು ಕೂಡಲೇ ತನಿಖೆ ನಡೆಸಿ, ಕೃತ್ಯವೆಸಗಿದ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.
