ಚಿಕ್ಕಮಗಳೂರು: ಎರಡು ತೆಂಗಿನ ಗಿಡಗಳನ್ನು ಕಡಿದು ಹಾಕಿದ ಕಾರಣಕ್ಕಾಗಿ ಸಿಟ್ಟಿಗೆದ್ದ ಮಾವನೊಬ್ಬ ತನ್ನ ಸ್ವಂತ ಅಳಿಯನನ್ನೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಭೀಕರ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಆಲದಹಳ್ಳಿ ತಾಂಡಾ ದಲ್ಲಿ ನಡೆದಿದೆ.
ಆಲದಹಳ್ಳಿ ತಾಂಡಾ ನಿವಾಸಿ ದೇವರಾಜ್ ನಾಯ್ಕ್ (35) ಕೊಲೆಯಾದ ದುರ್ದೈವಿಯಾಗಿದ್ದು, ಈತನ ಮಾವ ರಾಜಾನಾಯ್ಕ್ ಕೊಲೆಗೈದ ಆರೋಪಿಯಾಗಿದ್ದಾನೆ.
ಕುಟುಂಬದಲ್ಲಿದ್ದ ಭಿನ್ನಾಭಿಪ್ರಾಯದಿಂದಾಗಿ ದೇವರಾಜ್ ಅವರ ಪತ್ನಿ (ರಾಜಾನಾಯ್ಕ್ನ ಮಗಳು) ಗಂಡನನ್ನು ತೊರೆದು ಬೆಂಗಳೂರಿನಲ್ಲಿ ವಾಸವಾಗಿದ್ದರು. ಇದೇ ವಿಚಾರವಾಗಿ ಮಾವ ಮತ್ತು ಅಳಿಯನ ನಡುವೆ ಪ್ರತಿದಿನ ಜಗಳ ನಡೆಯುತ್ತಿತ್ತು.
ಘಟನೆಯ ದಿನವೂ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಆಕ್ರೋಶಗೊಂಡ ದೇವರಾಜ್ ಮಾವನ ಹೊಲದಲ್ಲಿದ್ದ ಎರಡು ತೆಂಗಿನ ಗಿಡಗಳನ್ನು ಕತ್ತರಿಸಿ ಹಾಕಿದ್ದ. ಇದರಿಂದ ರೊಚ್ಚಿಗೆದ್ದ ರಾಜಾನಾಯ್ಕ್, ತಕ್ಷಣವೇ ಮಚ್ಚಿನಿಂದ ದೇವರಾಜ್ನ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.
ಈ ಸಂಬಂಧ ಪಂಚನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
