ಶಿವಮೊಗ್ಗ: ಈ ಬಾರಿ ಚುನಾವಣೆ ನಡೆಯುತ್ತಿ ರುವುದು ಅಭಿವೃದ್ಧಿ ವರ್ಸಸ್ ಅ ಧಿಕಾರಕ್ಕಾಗಿ. ವೈಯಕ್ತಿಕವಾಗಿ ನಾಯಕರನ್ನು ಹೀಯಾಳಿಸುವ ಕೆಲಸ ಆಗುತ್ತಿದೆ. ಚುನಾವಣೆಯಲ್ಲಿ ಎಲ್ಲದಕ್ಕೂ ಉತ್ತರ ಕೊಡುತ್ತೇವೆ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಕುಟುಂಬದ ಕುರಿತು ತೇಜೋವಧೆ ಹೊಸದಲ್ಲ. ಶರಾವತಿ ಸಂತ್ರಸ್ತರ ಸಮಸ್ಯೆ ಕಾಂಗ್ರೆಸ್‌ನ ಪಾಪದ ಕೂಸು. ಕಾಂಗ್ರೆಸ್ ಪಾಪದ ಕೊಳೆಯನ್ನು ಅವರೇ ತೊಳೆಯಬೇಕು. ಬಿಜೆಪಿಯ ಜಿಲ್ಲಾ ಮುಖಂಡರು ಎಲ್ಲರೂ ಸೇರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಈ ಚುನಾವಣೆ ಮುಗಿದ ನಂತರ ಶರಾವತಿ ಸಂತ್ರಸ್ತರಿಗೆ ನ್ಯಾಯ ಕೊಡಿಸುವ ಕೆಲಸ ಖಂಡಿತ ಮಾಡುತ್ತೇನೆ. ವಿಐಎಸ್‌ಎಲ್ ಕಾರ್ಖಾನೆ ಬಂದ್ ಆಗಲು ಬಿಟ್ಟಿಲ್ಲ. ಎಂಪಿಎಂ ಕಾರ್ಖಾನೆಗೆ ಕೊನೆ ಮೊಳೆ ಹೊಡೆದಿದ್ದು ಕಾಂಗ್ರೆಸ್. ಈ ವಿಚಾರದಲ್ಲಿ ಕಾಂಗ್ರೆಸ್‌ನವರಿಗೆ ನಾಚಿಕೆ ಆಗಬೇಕು ಎಂದರು.
ಶಾಹಿ ಗಾರ್ಮೆಂಟ್ಸ್ ನೀಡಿದ ಜಮೀನಿಗೆ ಸಂಬಂಧಿಸಿದಂತೆ ಬೇಳೂರು ಗೋಪಾಲಕೃಷ್ಣ ಅವರು ತನಿಖೆ ಮಾಡುವಂತೆ ಒತ್ತಾಯಿಸಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದನ್ನು ಬೇಕಾದರೂ ತನಿಖೆ ಮಾಡಿಕೊಳ್ಳಲಿ. ಬೇಡ ಎಂದರೂ ಯಾವುದೇ ತನಿಖೆಗೆ ನಾನು ಸಿದ್ಧ ಎಂದರು.
ಉದ್ಯಮಿಗಳು ಬರುವುದು ಅವರಿಗೆ ಇಷ್ಟ ಇಲ್ಲ, ವಿಮಾನ ನಿಲ್ದಾಣದ ಬಗ್ಗೆಯೂ ತನಿಖೆ ಮಾಡಿಸುತ್ತೇವೆ ಎಂದಿದ್ದಾರೆ. ಒಳ್ಳೆಯ ವಿಮಾನ ನಿಲ್ದಾಣವಾಗಬೇಕಾದರೆ ಹೆಚ್ಚು ಜಾಗ ಬೇಕಾಗುತ್ತದೆ. ಮುಂದಿನ 50 ವರ್ಷವನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಮಾಡುತ್ತೇವೆ. ಹಾಗೆಯೇ ಕಳೆದ 10 ವರ್ಷಗಳಲ್ಲಿ ಅಡಕೆಯ ಬೆಲೆ ಕಡಿಮೆಯಾಗದಂತೆ ನೋಡಿಕೊಂಡಿದ್ದೇವೆ ಎಂದರು.