ಭದ್ರಾವತಿ: ತಾಲೂಕಿನಾದ್ಯಂತ ಭಾನುವಾರ ಸಂಜೆ ಸುರಿದ ಸಿಡಿಲು-ಗುಡುಗು ಸಹಿತ ಭಾರಿ ಮಳೆ ಭೀಕರ ಅನಾಹುತಕ್ಕೆ ಕಾರಣವಾಗಿದೆ. ತಾಲೂಕಿನ ಸಿರಿಯೂರು ಗ್ರಾಮದ ಬಳಿ ಸಿಡಿಲು ಬಡಿದ ಪರಿಣಾಮ 53 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮೂಲದ ನರಸಿಂಹಮೂರ್ತಿ ಅವರು ಸುಮಾರು 400 ಕುರಿಗಳ ಹಿಂಡನ್ನು ಮೇಯಿಸಲು ಭದ್ರಾವತಿ ತಾಲೂಕಿನ ಸಿರಿಯೂರು ಗ್ರಾಮದ ಬಳಿ ತಂದಿದ್ದರು. ಭಾನುವಾರ ರಾತ್ರಿ ಸಿರಿಯೂರಿನ ರವಿಕುಮಾರ್ ಎಂಬುವವರ ತೋಟದಲ್ಲಿ ಕುರಿಗಳನ್ನು ಬಿಟ್ಟು ವಾಸ್ತವ್ಯ ಹೂಡಿದ್ದ ವೇಳೆ, ಸಂಜೆ ಸುಮಾರು 7 ಗಂಟೆ ಸುಮಾರಿಗೆ ಏಕಾಏಕಿ ಭೀಕರ ಸಿಡಿಲು ಕುರಿಗಳ ಹಿಂಡಿನ ಮೇಲೆ ಬಿದ್ದಿದೆ.
ಸಿಡಿಲಿನ ತೀವ್ರತೆಗೆ ನರಸಿಂಹಮೂರ್ತಿಗೆ ಸೇರಿದ 53 ಕುರಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಕಣ್ಣೆದುರೇ ಮೂಕ ಪ್ರಾಣಿಗಳು ಸಾವನ್ನಪ್ಪಿದ ದೃಶ್ಯ ಕಂಡು ಕುರಿಗಾಹಿ ಕಣ್ಣೀರಿಟ್ಟಿದ್ದಾರೆ. ಘಟನೆಯಿಂದ ಸುಮಾರು 10 ಲಕ್ಷ ರೂಪಾಯಿಗೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ತಹಶೀಲ್ದಾರ್ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಿಗರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂತ್ರಸ್ತ ಕುರಿಗಾಹಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಪಶುವೈದ್ಯಾಧಿಕಾರಿಗಳು ಮೃತಪಟ್ಟ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದರು.
