ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಇನ್ನು ಮುಂದೆ ಸರ್ಕಾರದ ಕರ್ನಾಟಕ ಆಧುನಿಕ ಹಾಜರಾತಿ ನಿರ್ವಹಣಾ ವ್ಯವಸ್ಥೆ (KAAMS) ಅಡಿಯಲ್ಲಿ ಕಡ್ಡಾಯವಾಗಿ ಹಾಜರಾತಿ ದಾಖಲಿಸಬೇಕಾಗಿದೆ.
ಈ ಸಂಬಂಧ ಪೊಲೀಸ್ ಪ್ರಧಾನ ಕಚೇರಿಯಿಂದ ಜ್ಞಾಪನಾ ಪತ್ರ (ರಿಮೈಂಡರ್) ಹೊರಡಿಸಲಾಗಿದ್ದು, ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.
ಕರ್ನಾಟಕ ಸರ್ಕಾರದ ಆದೇಶದಂತೆ, ಎಲ್ಲಾ ಸರ್ಕಾರಿ ಇಲಾಖೆಗಳು, ನಿಗಮಗಳು ಹಾಗೂ ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಮೇ 1, 2026ರಿಂದ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಯಲ್ಲಿದೆ. ಇದರಡಿ ಸಿಬ್ಬಂದಿಗಳು ತಮ್ಮ ಮೊಬೈಲ್ನಲ್ಲಿ ‘ಕರ್ತವ್ಯ’ (KARTAVYA) ಆಪ್ ಬಳಸಿ ಪ್ರತಿದಿನ ಹಾಜರಾತಿ ದಾಖಲಿಸಬೇಕಾಗುತ್ತದೆ.
ಹೊಸ ವ್ಯವಸ್ಥೆಯ ಪ್ರಕಾರ, ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿದಿನ ಬೆಳಗ್ಗೆ 10 ಗಂಟೆಯೊಳಗೆ ‘ಕರ್ತವ್ಯ’ ಆಪ್ನಲ್ಲಿ Check-In ಮಾಡಬೇಕು. ಕರ್ತವ್ಯ ಮುಗಿಸಿ ಕಚೇರಿಯಿಂದ ನಿರ್ಗಮಿಸುವ ವೇಳೆ Check-Out ದಾಖಲಿಸುವುದು ಸಹ ಕಡ್ಡಾಯವಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಸರ್ಕಾರದ ಡಿಜಿಟಲ್ ಹಾಜರಾತಿ ವ್ಯವಸ್ಥೆ ಜಾರಿಯಾಗಿ ಎರಡು ತಿಂಗಳು ಕಳೆದಿದ್ದರೂ, ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿ ಇನ್ನೂ ‘ಕರ್ತವ್ಯ’ ಆಪ್ನಲ್ಲಿ ನೋಂದಣಿ ಮಾಡಿಕೊಂಡಿಲ್ಲ ಎಂಬುದು ಇಲಾಖೆಯ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ನೋಂದಣಿ ಮಾಡಿಕೊಳ್ಳದ ಸಿಬ್ಬಂದಿ ಕೂಡಲೇ ಆಪ್ನಲ್ಲಿ ಹೆಸರು ನೋಂದಾಯಿಸಿಕೊಂಡು ನಿಯಮಿತವಾಗಿ ಹಾಜರಾತಿ ದಾಖಲಿಸುವಂತೆ ಸೂಚಿಸಲಾಗಿದೆ.
ಪೊಲೀಸ್ ಪ್ರಧಾನ ಕಚೇರಿ ಹೊರಡಿಸಿರುವ ಜ್ಞಾಪನಾ ಪತ್ರದಲ್ಲಿ, ಎಲ್ಲಾ ಘಟಕಗಳ ಮುಖ್ಯಸ್ಥರು ತಮ್ಮ ಅಧೀನ ಸಿಬ್ಬಂದಿ ಕಡ್ಡಾಯವಾಗಿ ‘ಕರ್ತವ್ಯ’ ಆಪ್ ಬಳಸುವಂತೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಲಾಗಿದೆ. ಸರ್ಕಾರದ ಆದೇಶವನ್ನು ಪಾಲಿಸದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
