Trending

ಚುನಾವಣಾ ಪ್ರಚಾರಕ್ಕೆ ಮಕ್ಕಳ ಬಳಕೆ ಕೇಸ್‌ : ಶಾಸಕಿ ಶಾರದಾಗೆ ರಿಲೀಫ್‌

Spread the love

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ (2023 ಮೇ 2) ನಡೆದ ಚುನಾವಣಾ ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಂಡ ಆರೋಪದ ಮೇಲೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕಿ ಶಾರದಾ ಪೂರ್ಯ ನಾಯಕ್ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.

ತಮ್ಮ ವಿರುದ್ಧ ಶಿವಮೊಗ್ಗದ ಕುಂಸಿ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಹಾಗೂ ಅದನ್ನು ಆಧರಿಸಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣಾ ಪ್ರಕ್ರಿಯೆ ರದ್ದು ಕೋರಿ ಶಾಸಕರು ಸಲ್ಲಿಸಿದ್ದ ಅರ್ಜಿಯು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು.

ಪೊಲೀಸರು ಮೊದಲು ಪ್ರಕರಣವನ್ನು ಬಾಲ ಕಾರ್ಮಿಕ ಪದ್ದತಿ ನಿಷೇಧ ಕಾಯ್ದೆಯಡಿ ದಾಖಲಿಸಿಕೊಂಡು, ನಂತರ ಬಾಲ ನ್ಯಾಯ ಕಾಯ್ದೆಯಡಿ ಆರೋಪಪಟ್ಟಿ ಸಲ್ಲಿಸಿದ್ದಾರೆ. ಅಷ್ಟಕ್ಕೂ ಚುನಾವಣಾ ಪ್ರಚಾರದ ವೇಳೆ ಮಕ್ಕಳನ್ನು ಬಳಸಿಕೊಂಡಿಲ್ಲ. 2023ರಲ್ಲಿ ಮೇ 2ರಂದು ಬಾಳಪ್ರ ಚಾರ ಸಭೆಯ ಸ್ಥಳದ ಹತ್ತಿರದಲ್ಲೇ ಶಾಲೆ ಇತ್ತು. ಅದೇ ವೇಳೆ ಶಾಲೆ ಬಿಟ್ಟಿದ್ದರಿಂದ ಮಕ್ಕಳು ಸಭೆಯ ಬಳಿ ಅವರಾಗಿಯೇ ಬಂದು ನಿಂತಿದ್ದರು ಎಂಬ ಅಂಶವನ್ನು ಪರಿಗಣಿಸಿ ನ್ಯಾಯಪೀಠ ಆದೇಶ ನೀಡಿತು.

ಪ್ರಕರಣದ ಹಿನ್ನೆಲೆ:

2023ರ ವಿಧಾನಸಭೆ ಚುನಾವಣೆ ವೇಳೆ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಾಳಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಬ್ಬನಹಳ್ಳಿಯಲ್ಲಿ 2023ರ ಮೇ 2 ರಂದು ಬೆಳಿಗ್ಗೆ 11.30ಕ್ಕೆ ಜೆಡಿಎಸ್ ಅಭ್ಯರ್ಥಿ ಶಾರದಾ ಪೂರ್ಯ ನಾಯಕ್ ಅವರ ಚುನಾವಣಾ ಪ್ರಚಾರ ಸಭೆ ನಡೆದಿತ್ತು.

ಅದರಲ್ಲಿ ಮಕ್ಕಳನ್ನು ಬಳಸಿಕೊಳ್ಳಲಾಗಿದೆ ಎಂದು ಚುನಾವಣಾ ಕರ್ತವ್ಯದಲ್ಲಿದ್ದ ಎಂ.ಇ. ಜಯಪ್ರಕಾಶ್ ಎಂಬುವರು ದೂರು ನೀಡಿದ್ದರು. ಅದನ್ನು ಆಧರಿಸಿ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಅಂದು ಚುನಾವಣಾ ಕರ್ತವ್ಯದಲ್ಲಿದ್ದ ಎಂ.ಇ. ಜಯಪ್ರಕಾಶ್ ಎಂಬುವರು ದೂರು ನೀಡಿದ್ದರು.

[pj-news-ticker]