ಬೆಂಗಳೂರು: ‘ನಾನು ನಂದಿನಿ, ಬೆಂಗಳೂರಿಗೆ ಬಂದೀನಿ’ ಹಾಡಿನ ಖ್ಯಾತಿಯ, ಹಾಸ್ಯಮಯ ವಿಡಿಯೊಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ಕಂಟೆಂಟ್ ಕ್ರಿಯೇಟರ್ ‘ವಿಕ್ಕಿಪೀಡಿಯಾ’ ವಿಕಾಸ್ ಅವರನ್ನು ಪೊಲೀಸರು ವಿಚಾರಣೆ ನಡೆಸಿ, ವಾರ್ನಿಂಗ್ ಕೊಟ್ಟಿದ್ದಾರೆ.
ಮಾದಕವಸ್ತು ವ್ಯಸನದ ಬಗ್ಗೆ ವಿಡಿಯೊ ಮಾಡಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಹಿನ್ನೆಲೆಯಲ್ಲಿ ವಿಕಾಸ್ ಅವರನ್ನು ಬೈಯಪ್ಪನಹಳ್ಳಿ ಪೊಲೀಸರು ಠಾಣೆಗೆ ಕರೆಸಿಕೊಂಡು, ವಾರ್ನಿಂಗ್ ಕೊಟ್ಟು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
ಮಾದಕವಸ್ತು ವ್ಯಸನದ ಬಗ್ಗೆ ಇತ್ತೀಚೆಗೆ ವಿಕಾಸ್ ಹಾಗೂ ಅವರ ಬಳಗವು ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇರಿ ಹಲವು ಜಾಲತಾಣಗಳಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದರು. “ಇಂದಿನ ಯುವಕರು ಎಂಜಾಯ್‌ಮೆಂಟ್‌ಗೆ ಅಂತ ಮದ್ಯಪಾನ ಮಾಡೋದು, ಸಿಗರೇಟ್ ಸೇದೋದು, ಹುಡುಗೀರ್ ಹಿಂದೆ ಹೋಗ್ತಾರೆ. ಆದರೆ, ನಾನು ಎಂಜಾಯ್‌ಮೆಂಟ್ ಮಾಡಲು ಡ್ರಗ್ಸ್ ತಗೋತೀನಿ” ಎನ್ನುವ ರೀತಿಯಲ್ಲಿ ವಿಕಾಸ್ ಹಾಗೂ ಅವರ ಸ್ನೇಹಿತ ವಿಡಿಯೊ ಮಾಡಿದ್ದರು. ಹಾಗಾಗಿ, ಪೊಲೀಸರು ಕರೆಸಿ ವಾರ್ನಿಂಗ್ ಕೊಟ್ಟಿದ್ದಾರೆ ಎನ್ನಲಾಗಿದೆ.
ಡ್ರಗ್ಸ್ ಕುರಿತ ವಿಡಿಯೊ
ರೀಲ್ಸ್ ಸಂಬಂಧ ಕಂಟೆಂಟ್ ಕ್ರಿಯೇಟರ್ ವಿಕಾಸ್ ಅವರನ್ನು ಠಾಣೆಗೆ ಕರೆಸಿದ ಬೈಯಪ್ಪನಹಳ್ಳಿ ಪೊಲೀಸರು, ಈ ರೀತಿಯ ರೀಲ್ಸ್ ಮಾಡಬಾರದು. ಡ್ರಗ್ಸ್‌ನಂತಹ ವಿಷಯಗಳಿಗೆ ಸಂಬಂಧಿಸಿದಂತೆ ರೀಲ್ಸ್ ಮಾಡಿದರೆ, ಅದರಿಂದ ಪ್ರಚೋದನೆಗೊಂಡು, ಡ್ರಗ್ಸ್ ತೆಗೆದುಕೊಳ್ಳುವವರ ಸಂಖ್ಯೆ ಜಾಸ್ತಿಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ, ಇಂತಹ ರೀಲ್ಸ್ ಮಾಡಬಾರದು ಎಂಬುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಹಾಗೆಯೇ, ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದಾರೆ.
ನಾನು ನಂದಿನಿ, ಬೆಂಗಳೂರಿಗೆ ಬಂದೀನಿ ಎನ್ನುವ ಸಾಂಗ್ ಮೂಲಕ ವಿಕಾಸ್ ತುಂಬ ಖ್ಯಾತಿ ಗಳಿಸಿದ್ದರು. ಇವರು ವಿಭಿನ್ನ ಶೈಲಿಯಲ್ಲಿ ಮಾಡುವ ರೀಲ್ಸ್ ಯುವಕರು ಸೇರಿ ಎಲ್ಲರ ಗಮನ ಸೆಳೆದಿವೆ. ಲಕ್ಷಾಂತರ ವ್ಯೂಸ್‌ಗಳನ್ನು ಕೂಡ ಪಡೆದುಕೊಳ್ಳುತ್ತವೆ. ಇನ್‌ಸ್ಟಾಗ್ರಾಂನಲ್ಲಿ ವಿಕಾಸ್ ಪೇಜ್‌ಗೆ ಸುಮಾರು 7 ಲಕ್ಷಕ್ಕಿಂತ ಅಧಿಕ ಫಾಲೋವರ್ಸ್ ಇದ್ದಾರೆ.