ಶಿವಮೊಗ್ಗ : ಶಿವಮೊಗ್ಗದ ಗಾಂಧಿಬಜಾರ್ನಲ್ಲಿ ಶುಕ್ರವಾರ ಸಂಜೆ ನಡೆದ ರೌಡಿಶೀಟರ್ ನರಸಿಂಹ ಹತ್ಯೆ ಪ್ರಕರಣದ ಬೆನ್ನಲ್ಲೇ, ಆತನ ಆಪ್ತರು ಹಾಗೂ ಸಹಚರರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಪೋಸ್ಟ್ಗಳು ಮತ್ತು ಸ್ಟೋರಿಗಳು ಹೊಸ ಚರ್ಚೆಗೆ ಕಾರಣವಾಗಿವೆ.
ನರಸಿಂಹನ ಆಪ್ತ ಸ್ನೇಹಿತ ಹಾಗೂ ರೌಡಿಶೀಟರ್ ಆಗಿರುವ ಕಾಡಾ ಕಾರ್ತಿಕ್ ಮತ್ತು ಹಂದಿ ಅಣ್ಣಿ ಕೊಲೆ ಪ್ರಕರಣದ ಎ–2 ಆರೋಪಿಯಾಗಿರುವ ಬಜರಂಗಿ ನಿತಿನ್ ತಮ್ಮ ಇನ್ಸ್ಟಾಗ್ರಾಂ ಖಾತೆಗಳಲ್ಲಿ ಪ್ರತೀಕಾರದ ಸಂದೇಶದ ರೀತಿಯ ಸ್ಟೋರಿಗಳನ್ನು ಪ್ರಕಟಿಸಿರುವುದಾಗಿ ತಿಳಿದುಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಸ್ಟೋರಿಗಳಲ್ಲಿ ನರಸಿಂಹನ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವ ಕುರಿತು ಪರೋಕ್ಷ ಉಲ್ಲೇಖಗಳಿದ್ದು, ಸಾರ್ವಜನಿಕ ವಲಯದಲ್ಲಿ ಆತಂಕ ಮತ್ತು ಕುತೂಹಲಕ್ಕೆ ಕಾರಣವಾಗಿದೆ. ಹತ್ಯೆಯ ನಂತರ ನಗರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವ ಸಂದರ್ಭದಲ್ಲಿ ಇಂತಹ ಪೋಸ್ಟ್ಗಳು ಮತ್ತಷ್ಟು ಚರ್ಚೆಗೆ ಗ್ರಾಸವಾಗಿವೆ.
ಈ ಬೆಳವಣಿಗೆಗಳ ಮೇಲೂ ಪೊಲೀಸರು ನಿಗಾ ವಹಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿನ ಚಟುವಟಿಕೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇದೇ ವೇಳೆ ನರಸಿಂಹ ಹತ್ಯೆ ಪ್ರಕರಣದ ಆರೋಪಿಗಳ ಪತ್ತೆ ಮತ್ತು ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು, ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪ್ರಕರಣದ ತನಿಖೆ ವಿವಿಧ ಆಯಾಮಗಳಲ್ಲಿ ಸಾಗುತ್ತಿದ್ದು, ಹತ್ಯೆಯ ಹಿಂದಿನ ನಿಖರ ಕಾರಣ ಮತ್ತು ಆರೋಪಿಗಳ ಸುಳಿವಿಗಾಗಿ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
