ಸಾಗರ: ಕನ್ನಡದ 35 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ, ರಂಗಭೂಮಿ, ಪರಿಸರ ಹೋರಾಟಗಳಲ್ಲಿ ಸಕ್ರಿಯರಾಗಿದ್ದ ಯೇಸುಪ್ರಕಾಶ್ ಕಲ್ಲುಕೊಪ್ಪ(58) ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಶನಿವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನ ಹೊಂದಿದ್ದಾರೆ. ಮೃತರು ಪ್ರಶಸ್ತಿ ವಿಜೇತ ಶಿಕ್ಷಕಿ ಶೈಲಜಾ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
ಚಿತ್ರರಂಗದಲ್ಲಿ ಪ್ರಕಾಶ್ ಹೆಗ್ಗೋಡು ಎಂದು ಗುರ್ತಿಸಲ್ಪಡುತ್ತಿದ್ದ ಯೇಸು ಚಿತ್ರನಾಯಕ ಯಶ್ ಜತೆ ರಾಜಾಹುಲಿ ಸೇರಿದಂತೆ ದರ್ಶನ್, ಪುನೀತ್ ರಾಜಕುಮಾರ್ ಮೊದಲಾದವರ ಚಿತ್ರಗಳಲ್ಲಿ ಗಮನ ಸೆಳೆದಿದ್ದರು. ನೀನಾಸಂ ಜೊತೆ ನಿಕಟ ಸಂಬಂಧ ಹೊಂದಿದ್ದ ಯೇಸು ವಿವಿಧ ನಾಟಕಗಳಲ್ಲಿ, ಕಿರುತೆರೆಯಲ್ಲಿ ಕೂಡ ಕಾಣಿಸಿಕೊಂಡಿದ್ದರು.
ಇತ್ತೀಚಿನ ದಿನಗಳಲ್ಲಿ ಹೊಸನಗರದ ಸಾರಾ ಸಂಸ್ಥೆಯ ಜೊತೆ ಗುರ್ತಿಸಿಕೊಂಡು ಅವರು ಕೆರೆ ಪುನರುಜ್ಜೀವನ, ಪರಿಸರ ಸದೃಢತೆಯ ಯೋಜನೆಗಳಲ್ಲಿ ತೊಡಗಿಸಿಕೊಂಡು ಸಾಗರದ ಸುತ್ತಮುತ್ತಲೇ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಸಾರಾ ಸಂಸ್ಥೆಯ ಖಜಾಂಚಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಭಾನುವಾರ ಅವರ ಕಲ್ಲುಕೊಪ್ಪದ ಅವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಈ ವೇಳೆ ರಂಗ ನಮನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಗುವುದು ಎಂದು ಹೆಗ್ಗೋಡಿನ ನೀನಾಸಂ ಮೂಲಗಳು ತಿಳಿಸಿವೆ.