ನವದೆಹಲಿ: ಭಾರತ ಮಾತೆ ನೋವಿನಲ್ಲಿದ್ದಾಳೆ ಮತ್ತು ಸದ್ಯದ ಈ ದಬ್ಬಾಳಿಕೆಯ ಆಡಳಿತವು ಸ್ವೀಕಾರಾರ್ಹವಲ್ಲ ಎಂದು ಸುನೀತಾ ಕೇಜ್ರಿವಾಲ್ ಅವರು ಭಾನುವಾರ ರಾಮಲೀಲಾ ಮೈದಾನದಲ್ಲಿ ನಡೆದ ಇಂಡಿಯಾ ಮೈತ್ರಿಕೂಟದ ರ್‍ಯಾಲಿಯಲ್ಲಿ ಜೈಲಿನಲ್ಲಿರುವ ತಮ್ಮ ಪತಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಂದೇಶವನ್ನು ಓದಿದರು.
ಕಳೆದ 75 ವರ್ಷಗಳಲ್ಲಿ ದೆಹಲಿಯ ಜನರು ಅನ್ಯಾಯವನ್ನು ಎದುರಿಸಿದ್ದಾರೆ. ಇಂಡಿಯಾ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬಂದರೆ ನಾವು ದೆಹಲಿಯನ್ನು ಸಂಪೂರ್ಣ ರಾಜ್ಯವನ್ನಾಗಿ ಮಾಡುತ್ತೇವೆ ಎಂದು ಹೇಳಿದರು.
ಎನ್‌ಸಿಪಿ (ಶರದ್‌ಚಂದ್ರ ಪವಾರ್) ನಾಯಕ ಶರದ್ ಪವಾರ್, ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್ ರಾಮಲೀಲಾ ಮೈದಾನದಲ್ಲಿ ಜಮಾಯಿಸಿದ್ದರು.
ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ, ಎಎಪಿ ನಾಯಕ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಕೂಡ ರ್‍ಯಾಲಿಯಲ್ಲಿ ಭಾಗವಹಿಸಿದ್ದಾರೆ.
ಭಾರತ ಮಾತೆ ನೋವಿನಲ್ಲಿದ್ದಾಳೆ, ಈ ದೌರ್ಜನ್ಯ ಹೆಚ್ಚು ದಿನ ಕೆಲಸ ಮಾಡುವುದಿಲ್ಲ. ನನ್ನ ಪತಿಗೆ ಸಾಕಷ್ಟು ಆಶೀರ್ವಾದಗಳು ಸಿಗುತ್ತಿವೆ. ಇಂಡಿಯಾ ಮೈತ್ರಿಕೂಟಕ್ಕೆ ಮತ ಹಾಕಿದರೆ ಉತ್ತಮ ಆಸ್ಪತ್ರೆಗಳು ಮತ್ತು ಶಿಕ್ಷಣ ಸೇರಿದಂತೆ ಆರು ಭರವಸೆಗಳನ್ನು ಪೂರೈಸುತ್ತದೆ. ನೀವು ಇಂಡಿಯಾ ಮೈತ್ರಿಕೂಟಕ್ಕೆ ಅವಕಾಶ ನೀಡಿದರೆ, ನಾವು ಶ್ರೇಷ್ಠ ರಾಷ್ಟ್ರವನ್ನು ನಿರ್ಮಿಸುತ್ತೇವೆ’ ಎಂದು ಸುನೀತಾ ಹೇಳಿದರು.